ಬೆಂಗಳೂರು: ವಾಟ್ಸಾಪ್ ಆಧಾರಿತ ರಾಜಕೀಯ ಜಾಹೀರಾತುಗಳನ್ನು ನಿಭಾಯಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಬಿಬಿಎಂಪಿ ಚುನಾವಣಾ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್ ಹೇಳಿದ್ದಾರೆ.
ವಿದ್ಯುನ್ಮಾನ, ಮುದ್ರಣ, ಸಾಮಾಜಿಕ ಜಾಲತಾಣಗಳು, ಎಸ್ಎಂಎಸ್ ಮೂಲಕ ಜಾಹೀರಾತುಗಳ ನಿಯಮಾವಳಿಗಳ ಕುರಿತು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಾಹೀರಾತುಗಳಲ್ಲಿ ವೈಯಕ್ತಿಕ ನಿಂದನೆ, ಜಾತಿ ಮತ್ತು ಧರ್ಮದ ಉಲ್ಲೇಖ ಇರಬಾರದು ಎಂದು ಹೇಳಿದ್ದಾರೆ.
ನಾಮನಿರ್ದೇಶನ ಪ್ರಕ್ರಿಯೆ ಪ್ರಾರಂಭವಾದ ನಂತರ ಈ ಜಾಹೀರಾತುಗಳ ವೆಚ್ಚವನ್ನು ಅಭ್ಯರ್ಥಿಗಳ ಖಾತೆಗೆ ಸೇರಿಸಲಾಗುವುದು. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ವಿಧಾನಸಭಾ ಚುನಾವಣಾ ಮಾಹಿತಿ ಪ್ರಕಟಿಸುವಾಗ ಚುನಾವಣಾ ನೀತಿ ಸಂಹಿತೆ ಪಾಲಿಸಬೇಕು ಹಾಗೂ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ವಾಟ್ಸಾಪ್ ಆಧಾರಿತ ರಾಜಕೀಯ ಜಾಹೀರಾತುಗಳನ್ನು ನಿಭಾಯಿಸುವುದು ಇತ್ತೀಚೆಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಸಿವಿಜಿಲ್ ಆ್ಯಪ್‌ನಲ್ಲಿ ದೂರು ನೀಡಿದರೆ ಮಾತ್ರ ಈ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಯಾವುದೇ ದೂರುಗಳು ಬಂದರೂ ವಾಟ್ಸಾಪ್ ಅಡ್ಮಿನ್‌ಗಳ ವಿರುದ್ಧ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ವಾಟ್ಸಾಪ್ ಚುನಾವಣಾ ಜಾಹೀರಾತುಗಳ ಮೇಲೆ ನಿಗಾ ಇಡುವುದು ಕಷ್ಟ. ಇವುಗಳ ಮೇಲೆ ನಿಗಾ ಇರಿಸಿದ್ದೇ ಅದರೆ, ಅದು ಕಲಿಕೆಯ ಅನುಭವವಾಗಿರುತ್ತದೆ. ವಿದ್ಯುನ್ಮಾನ ಮತ್ತು ಇತರ ಮಾಧ್ಯಮ ವೇದಿಕೆಗಳಲ್ಲಿ ಜಾಹೀರಾತಿಗಾಗಿ ಅಭ್ಯರ್ಥಿಗಳು ಜಿಲ್ಲಾ ಚುನಾವಣಾ ಅಧಿಕಾರಿಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಮಾಧ್ಯಮ ಪ್ರಮಾಣೀಕರಣ ಮತ್ತು ಮಾನಿಟರಿಂಗ್ ಸಮಿತಿಯನ್ನು ಸಂಪರ್ಕಿಸಬೇಕು. ಆದರೆ ಮುದ್ರಣಕ್ಕೆ ಅಂತಹ ಯಾವುದೇ ಪ್ರಮಾಣೀಕರಣ ಅಗತ್ಯವಿರುವುದಿಲ್ಲ ಎಂದು ಹೇಳಿದ್ದಾರೆ.