ಚಾಮರಾಜನಗರ: ಬಂಡೀಪುರ ಅರಣ್ಯವನ್ನು ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಿ 50 ವರ್ಷ ಸಂದಿವೆ. ಈ ಹಿನ್ನೆಲೆ ಏ. 9ರಂದು ಪ್ರಧಾನಿ ನರೇಂದ್ರ ಮೋದಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಏ. 8ರ ರಾತ್ರಿ ಮೈಸೂರಿಗೆ ಆಗಮಿಸಲಿದ್ದು, ಅಂದು ರಾತ್ರಿ ಮೈಸೂರಿನಲ್ಲಿಯೇ ಉಳಿಯಲಿದ್ದಾರೆ. ಏ. 9ರಂದು ಬಂಡೀಪುರಕ್ಕೆ ಆಗಮಿಸಲಿದ್ದಾರೆ. ಬಳಿಕ ಸಫಾರಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆ ಏ.8 ಹಾಗೂ 9 ರಂದು ಬಂಡೀಪುರ ಉದ್ಯಾನವನಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹುಲಿಗಳ ಗಣತಿ ವರದಿ ಬಿಡುಗಡೆ
ಹುಲಿ ಸಂರಕ್ಷಣಾ ಯೋಜನೆಗೆ 50 ವರ್ಷ ಪೂರೈಸಿರುವ ಹಿನ್ನೆಲೆ ಇತ್ತೀಚೆಗೆ ಬಿಡುಗಡೆ ಮಾಡಿರುವ ಹುಲಿಗಳ ಗಣತಿ ವರದಿಯನ್ನು ಪ್ರಧಾನಿ ಮೋದಿ ಏ. 9ರಂದು ಬಿಡುಗಡೆ ಮಾಡಲಿದ್ದಾರೆ. ಅಲ್ಲದೆ, ಈ ಸಮಾರಂಭದ ಸ್ಮರಣಾರ್ಥ ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿರುವ ವಿಶೇಷ ನಾಣ್ಯಗಳನ್ನೂ ಬಿಡುಗಡೆ ಮಾಡಲಿದ್ದಾರೆ.
ಭದ್ರತಾ ಪರಿಶೀಲನೆ
ಕೇಂದ್ರ ಸರ್ಕಾರದಿಂದ ಆಗಮಿಸಿದ್ದ ಭದ್ರತಾ ತಂಡವೊಂದು, ಸಫಾರಿ ನಡೆಸುವ ಸ್ಥಳ, ಮೋದಿ ಪ್ರಯಾಣಿಸುವ ಮಾರ್ಗ, ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿರುವ ವ್ಯವಸ್ಥೆಗಳೆಲ್ಲವನ್ನೂ ಪರಿಶೀಲಿಸಿದೆ. ಅಂದು ಭದ್ರತೆಗಾಗಿ 1,500 ಪೊಲೀಸರನ್ನು ನಿಯೋಜಿಸಲು ನಿರ್ಧರಿಸಲಾಗಿದೆ.
ಆನೆ ರಕ್ಷಿಸಿದ್ದ ಸಿಬ್ಬಂದಿಗೆ ಸನ್ಮಾನ
ವಿದ್ಯುತ್ ತಂತಿ ತಗುಲಿದ್ದ ಕಾಡಾನೆಯನ್ನು ಬಂಡೀಪುರದ ಸಿಬ್ಬಂದಿ ರಕ್ಷಣೆ ಮಾಡಿದ್ದರು. ಈ ಸಿಬ್ಬಂದಿಗೆ ಏ. 9ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸನ್ಮಾನ ಮಾಡಲಿದ್ದಾರೆ.