ಮೈಸೂರು: ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಈಗ ಭಾರತದಲ್ಲಿ ಒಟ್ಟು 3,167 ಹುಲಿಗಳಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳೀದ್ರು.
ಮೈಸೂರು ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಆಯೋಜನೆಗೊಂಡ ಹುಲಿ ಯೋಜನೆಯ ಸುವರ್ಣ ಕಾರ್ಯಕ್ರಮದಲ್ಲಿ ಹುಲಿ ಗಣತಿ ವರದಿ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ 2022ರ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಿದರು.
ಇದೀಗ ವಿಶ್ವದ ಒಟ್ಟು ಹುಲಿಗಳ ಪೈಕಿ ಶೇ.75 ರಷ್ಟು ಭಾರತದಲ್ಲಿದೆ ಎಂದ ಮೋದಿ ವಿಶ್ವದ ಭೂ ಪ್ರದೇಶದ ಕೇವಲ ಶೇ.2.4 ರಷ್ಟು ಭೂಮಿಯನ್ನು ಹೊಂದಿರುವ ಭಾರತವು ಜಾಗತಿಕ ವೈವಿಧ್ಯತೆಗೆ ಶೇ.8 ರಷ್ಟು ಕೊಡುಗೆ ನೀಡುತ್ತದೆ. ದಶಕಗಳ ಹಿಂದೆಯೇ ಭಾರತದಲ್ಲಿ ಚೀತಾಗಳು ಅಳಿದು ಹೋಗಿದ್ದವು. ನಾವು ಈಗ ಚೀತಾವನ್ನು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತಂದಿದ್ದೇವೆ. ಪ್ರಕೃತಿ ಸಂರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ರು.
ಹುಲಿ ಗಣತಿ ವಿವರ
2018ರಲ್ಲಿ 2,967ರಷ್ಟಿದ್ದ ಹುಲಿಗಳ ಸಂಖ್ಯೆ ಈಗ 3,167ಕ್ಕೆ ಅಂದರೆ 6.74 % ಹೆಚ್ಚಾಗಿದೆ
2006ರಲ್ಲಿ 1,411 ಹುಲಿಗಳಿದ್ದವು. 2010ರಲ್ಲಿ 1,706, 2014ರಲ್ಲಿ 2,226 ಮತ್ತು 2018ರಲ್ಲಿ 2,967ಕ್ಕೆ ತಲುಪಿದೆ.
2006ರಿಂದ ಹುಲಿ ಸಂಖ್ಯೆಯಲ್ಲಿ 124.45% ಹೆಚ್ಚಳವಾಗಿದೆ.
2006ರಲ್ಲಿ ದೇಶದಲ್ಲಿ 28 ಹುಲಿ ಸಂರಕ್ಷಿತ ಪ್ರದೇಶಗಳು ಇದ್ದರೆ ಇಂದು 51ಕ್ಕೆ ತಲುಪಿದೆ
2014ರಲ್ಲಿ 7,910ರಷ್ಟಿದ್ದ ಚಿರತೆಗಳ ಸಂಖ್ಯೆ 2018ರಲ್ಲಿ 12,852ಕ್ಕೆ ಏರಿಕೆಯಾಗಿದೆ.
ಪ್ರಕೃತಿಯನ್ನು ರಕ್ಷಿಸುವುದು ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಪ್ರಾಜೆಕ್ಟ್ ಟೈಗರ್‌ನ ಯಶಸ್ಸು ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಹೆಮ್ಮೆಯ ವಿಷಯ. ಭಾರತ ಸ್ವಾತಂತ್ರ ಪಡೆದು 75 ವರ್ಷ ಪೂರ್ಣಗೊಳಿಸಿದೆ. ಈ ಸಂದರ್ಭದಲ್ಲಿ ನಾವು ಎಲ್ಲರೀತಿಯಲ್ಲೂ ಶಕ್ತಿಯುತ ರಾಷ್ಟ್ರವಾಗಿ ಹೊರಹೊಮ್ಮುತ್ತಿದ್ದೇವೆ ಎಂದ್ರು