ಜೈಸಲ್ಮೇರ್: ರಾಜಸ್ಥಾನದ ಜೈಸಲ್ಮೇರ್‌ನ ಪೋಖರಾನ್ ವ್ಯಾಪ್ತಿಯಲ್ಲಿ ಭಾರತೀಯ ಸೇನೆ ಫೀಲ್ಡ್ ಫೈರಿಂಗ್ ಅಭ್ಯಾಸ ನಡೆಸುತ್ತಿದ್ದಾಗ ಕ್ಷಿಪಣಿ ಮಿಸ್‌ಫೈರ್ ಆಗಿರುವ ಪ್ರಕರಣ ವರದಿಯಾಗಿದೆ.
ಭಾರತೀಯ ಸೇನೆಯ ಅಧಿಕಾರಿಗಳ ಪ್ರಕಾರ, ತಾಂತ್ರಿಕ ದೋಷದಿಂದ ಕ್ಷಿಪಣಿ ಮಿಸ್ ಫೈರಿಂಗ್ ಆಗಿದ್ದು, ಅದರ ಅವಶೇಷಗಳು ಪಕ್ಕದ ಹೊಲಗಳಲ್ಲಿ ಬಿದ್ದಿವೆ. ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿಯಾಗಿಲ್ಲ ಎಂದು ಸೇನೆ ತಿಳಿಸಿದೆ. ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ.
ಮೂರು ಕ್ಷಿಪಣಿಗಳು ಅಭ್ಯಾಸದ ಸ್ಥಳದಿಂದ ಹೊರಗೆ ಹೋಗಿ, ವಿವಿಧ ಗ್ರಾಮಗಳ ಹೊಲಗಳಲ್ಲಿ ಬಿದ್ದಿವೆ. ಇವುಗಳಿಂದ ದೊಡ್ಡ ಸ್ಫೋಟ ಸಹ ಉಂಟಾಗಿದೆ. ಒಂದು ಕ್ಷಿಪಣಿಯ ಅವಶೇಷಗಳು ಅಜಸರ್ ಗ್ರಾಮದ ಬಳಿಯ ಕಚ್ಚಬ್ ಸಿಂಗ್ ಅವರ ಜಮೀನಿನಲ್ಲಿ ಕಂಡುಬಂದಿದೆ. ಮತ್ತೊಂದು ಕ್ಷಿಪಣಿಯ ಅವಶೇಷ ಸತ್ಯಯ್ಯ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದ್ದು, ಮೂರನೇ ಕ್ಷಿಪಣಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಮಿಲಿಟರಿ ವ್ಯಾಯಾಮದ ಸಮಯದಲ್ಲಿ ಕ್ಷಿಪಣಿಗಳು ಮಿಸ್ ಆಗಿ ಹಾರಿವೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಅಮಿತಾಭ್ ಶರ್ಮಾ ಹೇಳಿದ್ದಾರೆ.
10 ರಿಂದ 25 ಕಿಲೋಮೀಟರ್ ವ್ಯಾಪ್ತಿ ಒಳಗಿನ ಕ್ಷಿಪಣಿಗಳನ್ನು ಭಾರತೀಯ ಸೇನೆ ಪರೀಕ್ಷೆಗೆ ಒಳಪಡಿಸುತ್ತಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಅದು ಬೇರೆ ಮಾರ್ಗದತ್ತ ಹಾರಿದೆ. ನಚನಾ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಕೈಲಾಶ್ ವಿಷ್ಣೋಯ್ ಈ ಘಟನೆಯನ್ನು ದೃಢಪಡಿಸಿದ್ದಾರೆ. ಅಲ್ಲದೇ ಅಜಸರ್ ಗ್ರಾಮದ ಹೊಲವೊಂದರಲ್ಲಿ ಕ್ಷಿಪಣಿ ಪತ್ತೆಯಾಗಿದೆ ಎಂದು ಅವರು ಮಾಹಿತಿ ನೀಡಿದರು. ಎರಡನೇ ಕ್ಷಿಪಣಿ ಮತ್ತೊಂದು ಕ್ಷೇತ್ರದಲ್ಲಿ ಪತ್ತೆಯಾಗಿದೆ. ಕ್ಷಿಪಣಿಯು ಕ್ಷೇತ್ರದಲ್ಲಿ ದೊಡ್ಡ ಕುಳಿಗಳನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು.