ಬೆಂಗಳೂರು: ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಹಿರಿಯ ಶಾಸಕ ಬಿ.ಆರ್. ಪಾಟೀಲ್ (BR Patil) ಅವರು ರಾಜ್ಯ ನೀತಿ ಆಯೋಗದ (State Policy Commission) ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ (BR Patil Resignation) ನೀಡಿದ್ದಾರೆ.
ತಮ್ಮ ನಿರ್ಧಾರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಸಚಿವ ಸ್ಥಾನ ಸಿಗದಿರುವುದು ಸಹಜವಾಗಿಯೇ ಬೇಸರ ತಂದಿದೆ. ಆದರೆ ಐದು ದಶಕಗಳ ತಮ್ಮ ರಾಜಕೀಯ ಪಯಣದಲ್ಲಿ ಹುದ್ದೆ ಮತ್ತು ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷದ ತತ್ವ-ಸಿದ್ಧಾಂತಗಳೇ ಮೇಲು ಎಂದು ನಾನು ನಂಬಿದ್ದೇನೆ. ಕಾಂಗ್ರೆಸ್ ಪಕ್ಷದ ಮೇಲಿನ ನನ್ನ ನಿಷ್ಠೆ ಎಂದಿಗೂ ಅಚಲವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ತಾವು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಅವರು, ಶಾಸಕ ಹುದ್ದೆಯು ನನಗೆ ಸಿಕ್ಕ ಅಧಿಕಾರವಲ್ಲ, ಬದಲಾಗಿ ಕ್ಷೇತ್ರದ ಜನತೆ ನನ್ನ ಮೇಲಿಟ್ಟು ಕೊಟ್ಟಿರುವ ದೊಡ್ಡ ಜವಾಬ್ದಾರಿ. ಮತದಾರರ ಜನಾದೇಶಕ್ಕೆ ಎಂದಿಗೂ ದ್ರೋಹ ಬಗೆಯುವುದಿಲ್ಲ. ಸಚಿವ ಸ್ಥಾನ ಸಿಗಲಿ, ಸಿಗದಿರಲಿ ಕ್ಷೇತ್ರದ ಜನರ ಸೇವೆಯಲ್ಲಿ ಸದಾ ಸಕ್ರಿಯವಾಗಿರುತ್ತೇನೆ ಎಂದು ತಿಳಿಸಿದ್ದಾರೆ.