ಬೆಂಗಳೂರು : ಸಚಿವರ ಆಯ್ಕೆ ವಿಚಾರವಾಗಿ ಮಾಧ್ಯಮಗಳಲ್ಲಿ ಬರುತ್ತಿರುವ ಹೆಸರುಗಳು ಅಧಿಕೃತವಲ್ಲ.ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್ (DK Shivakumar) ಅವರು ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಂಗಳವಾರ ರಾತ್ರಿ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ಅವರು, ನಾಳೆ ಬೆಳಗ್ಗೆ 10 ಗಂಟೆ ಅಥವಾ ಮಧ್ಯಾಹ್ನದ ವೇಳೆಗೆ ಹೈಕಮಾಂಡ್ ನಾಯಕರು ಸಚಿವರ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದರು.
“ಸಚಿವರ ಆಯ್ಕೆ ವಿಚಾರವಾಗಿ ಹೈಕಮಾಂಡ್ ನಾಯಕರು ಚರ್ಚೆ ಮಾಡಿದ್ದು, ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ. ಹೈಕಮಾಂಡ್ ನಾಯಕರು ಅಂತಿಮ ತೀರ್ಮಾನ ಮಾಡಲಿದ್ದಾರೆ. ದೆಹಲಿ ನಾಯಕರು ನಮಗೆ ಪಟ್ಟಿ ರವಾನೆ ಮಾಡಿದ ಬಳಿಕ, ನಾವು ಅದನ್ನು ರಾಜಭವನಕ್ಕೆ ಕಳುಹಿಸಿಕೊಡುತ್ತೇವೆ” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೇರೆ ದಿನ ಕಾಂಗ್ರೆಸ್ ಭವನ ಶಂಕುಸ್ಥಾಪನೆ
“ನಾಳೆ ಸಂಜೆ ನಡೆಯಬೇಕಿದ್ದ ಕಾಂಗ್ರೆಸ್ ಭವನ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಬೇರೊಂದು ದಿನ ನಡೆಸಲು ತೀರ್ಮಾನಿಸಿದ್ದೇವೆ. ಆಹ್ವಾನ ಪತ್ರಿಕೆ ಪಡೆದಿರುವ ಬ್ಲಾಕ್, ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಗ್ಯಾರಂಟಿ ಸಮಿತಿಯವರು ಕಾಂಗ್ರೆಸ್ ಕಚೇರಿಯ ಭಾರತ ಜೋಡೋ ಭವನಕ್ಕೆ ಆಗಮಿಸಬೇಕು. ನಾನು ಸಚಿವ ಸಂಪುಟ ಸಭೆ ಮಾಡಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೀಳ್ಕೊಟ್ಟು ನಂತರ ಭಾರತ ಜೋಡೋ ಭವನದಲ್ಲಿ ಭೇಟಿ ಮಾಡುವೆ” ಎಂದು ಮಾಹಿತಿ ನೀಡಿದರು.