ಬೆಂಗಳೂರು: ರಾಮರಾಜ್ಯದ ಪರಿಕಲ್ಪನೆಯಲ್ಲಿ ಬಿಜೆಪಿ ಪ್ರಣಾಳಿಕೆ ಸಿದ್ದವಾಗಿದ್ದು, ರಾಜ್ಯದ ಆರ್ಥಿಕ ಸ್ಥಿತಿ-ಶಕ್ತಿಯನ್ನು ಆಧರಿಸಿ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಪ್ರಣಾಳಿಕೆ ಅಭಿಯಾನ ಸಲಹಾ ಸಮಿತಿ ಸಭೆಯಲ್ಲಿ ಮಾತಾಡಿದ ಅವರು, ಪ್ರತಿ ಜಿಲ್ಲೆ ತಾಲೂಕುಗಳಿಂದ ಸಲಹೆ ಪಡೆದು ಪ್ರತಿಯೊಂದು ವರ್ಗದ ಜನರ ಅಗತ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಬಿಜೆಪಿ ಪ್ರಣಾಳಿಕೆ ಸಿದ್ದವಾಗಲಿದೆ ಎಂದಿದ್ದಾರೆ.
ಪೊಳ್ಳು ಭರವಸೆ, ಸುಳ್ಳು ಗ್ಯಾರೆಂಟಿಯ ಪ್ರಣಾಳಿಕೆ ನಮ್ಮದಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ಪರೋಕ್ಷವಾಗಿ ಟೀಕಿಸಿದ ಸುಧಾಕರ್, ಬಿಜೆಪಿಯ ಪ್ರಣಾಳಿಕೆ ಕೇವಲ ಘೋಷಣೆಗೆ ಸೀಮಿತವಾಗದೆ ಐದು ವರ್ಷ ನಮ್ಮ ಸರ್ಕಾರ ಮಾಡಬೇಕಾಗಿರುವ ಮಾಡಬಹುದಾದ ಅಭಿವೃದ್ಧಿಯ ನೀಲಿನಕ್ಷೆಯಾಗಲಿದೆ. ಒಂದುವಾರದಲ್ಲಿ ಪ್ರಣಾಳಿಕೆ ಬಿಡುಗಡೆಯಾಗಲಿದ್ದು, ಗ್ರೇಟರ್ ಬೆಂಗಳೂರು, ಕರಾವಳಿ ಪ್ರದೇಶ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೇ ಮೈಸೂರು ಇತ್ಯಾದಿ ವಲಯವಾರು, ಜಿಲ್ಲಾವಾರು ಪ್ರಣಾಳಿಕೆ ಮಾಡಲು ಅವಕಾಶವಿದೆ ಎಂದು ತಿಳಿಸಿದರು.