ನವದೆಹಲಿ: ರಾಜಕೀಯ ವಲಯದಲ್ಲಿ ದಿನಕ್ಕೊಂದು ಮಹತ್ವ ಬೆಳವಣಿಗೆ ನಡೆಯುತ್ತಿದ್ದು, ವಸತಿ ಸಚಿವ ವಿ. ಸೋಮಣ್ಣ ಅವರು ಮಗನ ಪರವಾಗಿ ನವದೆಹಲಿಗೆ ತೆರಳಿದ್ದು, ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಒಂದು ಬೇಡಿಕೆ ಮುಂದಿಟ್ಟಿದ್ದಾರೆ.
ವಸತಿ ಸಚಿವ ವಿ. ಸೋಮಣ್ಣ ಅವರು ಗೋವಿಂದರಾಜ ನಗರ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದೆ. ಈಗ ತಮ್ಮ ಪುತ್ರ ಅರುಣ್‌ಗೆ ಗುಬ್ಬಿ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತುಮಕೂರು ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರವಾದ ಅಡಿಪಾಯ ಹಾಕಲು ಎಲ್ಲ ರೀತಿಯಲ್ಲೂ ಕಸರತ್ತು ನಡೆದಿದೆ. ಇದರಲ್ಲಿ ಮೊದಲ ಹೆಜ್ಜೆಯನ್ನು ವರ್ಚಸ್ಸು ಹೊಂದಿರುವ ಸೋಮಣ್ಣ ಅವರು ಇಟ್ಟಿದ್ದು, ಈಗ ಗುಬ್ಬಿಯಲ್ಲಿ ಹೊಸ ತಂತ್ರಗಾರಿಕೆ ಮೂಲಕ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಪಣತೊಟ್ಟಿದ್ದಾರೆ.
ಸೋಮಣ್ಣ ಅವರು ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ಇಲ್ಲಿ ಮಗ ಅರುಣ್‌ಗೆ ಟಿಕೆಟ್ ನೀಡಿದರೆ ಗೆಲ್ಲಬಹುದು ಎಂಬ ಲೆಕ್ಕಾಚಾರವನ್ನು ವರಿಷ್ಠರ ಮುಂದೆ ಮಂಡಿಸಿದ್ದಾರೆ.
ಈ ಕ್ಷೇತ್ರವನ್ನು ಪ್ರತಿನಿಸುತ್ತಿದ್ದ ಗುಬ್ಬಿ ಶ್ರೀನಿವಾಸ್(ವಾಸು) ಅವರು ಪ್ರಸ್ತುತ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇದರಿಂದಾಗಿ ಇವೆರಡೂ ಪಕ್ಷಗಳಿಂದಾಗಿ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಇದರ ಲಾಭವನ್ನು ಬಿಜೆಪಿ ಪಡೆಯಬಹುದು. ಇದರಿಂದ ಕೊನೆಯ ಗಳಿಗೆಯಲ್ಲಿ ಸೋಮಣ್ಣ ಹೊಸ ಬೇಡಿಕೆಯನ್ನು ಮುಂದಿಟ್ಟಿರುವುದು ಬಾರಿ ಕುತೂಹಲ ಕೆರಳಿಸಿದೆ.