ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದೆ. ಯಾರು ಕೂಡ, ಯಾವುದೇ ಕಾರಣಕ್ಕೂ ನೀತಿ ಸಂಹಿತೆ ಉಲ್ಲಂಘಿಸಬಾರದು ಎಂದು ಹೇಳಲಾಗಿತ್ತು. ಆದರೂ ಸಚಿವೆಯೊಬ್ಬರು ನೀತಿ ಸಂಹಿತೆ ಉಲ್ಲಂಘಿಸಿ ಪೇಚಿಗೆ ಸಿಲುಕಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ನಿಪಾಣಿ ಪೊಲೀಸ್ ಠಾಣೆಯಲ್ಲಿ ಗುರುವಾರ ಸಂಜೆ ಎಫ್‌ಐಆರ್ ದಾಖಲಾಗಿದೆ.
ಫ್ಲೈಯಿಂಗ್ ಸ್ಕ್ವಾಡ್ ಮುಖ್ಯಸ್ಥರೂ ಆಗಿರುವ ನಿಪಾಣಿ ನಗರ ಪಾಲಿಕೆಯ ಆಯುಕ್ತ ಜಗದೀಶ್ ಹುಲಗೆಜ್ಜಿ ಘಟನೆಯ ವಿಡಿಯೋ ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಕಾರ್ಯಕ್ರಮ ಆಯೋಜಿಸಿದ್ದ ರಣರಾಗಿಣಿ ಮಹಿಳಾ ಮಂಡಳ ಅಧ್ಯಕ್ಷರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಸ್ಥಳೀಯ ಪುರಸಭೆಯ ಪ್ರೌಢಶಾಲೆಯಲ್ಲಿ ಮಹಿಳೆಯರಿಗಾಗಿ ಬುಧವಾರ ಸಂಜೆ 5 ಗಂಟೆಯಿಂದ ರಾತ್ರಿ 10 ರವರೆಗೆ ಆಯೋಜಿಸಿದ್ದ ‘ಅರಿಶಿಣ ಕುಂಕುಮ’ ಕಾರ್ಯಕ್ರಮದಲ್ಲಿ ಶಶಿಕಲಾ ಜೊಲ್ಲೆ ಭಾಗವಹಿಸಿದ್ದರು. ಈ ಕಾರ್ಯಕ್ರಮ ಆಯೋಜನೆಯಾಗಿದ್ದ ಸ್ಥಳದಲ್ಲಿ ಸ್ಥಳೀಯ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಚಿತ್ರಗಳ ಬ್ಯಾನರ್ಗಳು ಹಾಗೂ ಬಿಜೆಪಿ ಧ್ವಜಗಳನ್ನು ಹಾಕಲಾಗಿತ್ತು. ಹೀಗಾಗಿ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ ಎಂದು ಎಫ್‌ಐಆರ್ ದಾಖಲಾಗಿದೆ.