ರಾಜ್ಯದಲ್ಲಿ ಭಾರೀ ಚರ್ಚೆಯನ್ನು ಸೃಷ್ಟಿಸಿರುವ ಉರಿಗೌಡ-ನಂಜೇಗೌಡ ಪಾತ್ರಗಳ ಕುರಿತು ಸಿನೆಮಾ ನಿರ್ಮಿಸಲು ಸಚಿವ ಮುನಿರತ್ನ ಮುಂದಾಗಿದ್ದಾರೆ. ಈಗಾಗಲೇ ಕುರುಕ್ಷೇತ್ರ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿರುವ ಮುನಿರತ್ನ, ವಿವಾದಿತ ಪಾತ್ರಗಳ ಸಿನಿಮಾ ಮಾಡಲೆಂದು ಅವರು ಎರಡು ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ.
ಟಿಪ್ಪುವನ್ನು ಕೊಂದ ಒಕ್ಕಲಿಗ ವೀರರು ಎಂದು ಬಿಂಬಿಸಿ ಬಲಪಂಥೀಯ ರಾಜಕಾರಣ ಮಾಡುತ್ತಿರುವ ಪ್ರಚಾರವು, ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ನಾಡಿನ ಹಲವು ಚಿಂತಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಮುನಿರತ್ನ ಅವರು ಚಿತ್ರ ನಿರ್ಮಿಸಲು ಹೆಸರು ರಿಜಿಸ್ಟರ್ ಮಾಡಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಈ ನಡೆಯ ವಿರುದ್ಧ ಅಸಮಾಧಾನ ಹೊರಹಾಕಿದ್ದು, “ಸಚಿವರು, ವೃತ್ತಿಯಲ್ಲಿ ಚಿತ್ರ ನಿರ್ಮಾಪಕರಾದ ಶ್ರೀ ಮುನಿರತ್ನ ಅವರು ತಮ್ಮ ವೃಷಭಾದ್ರಿ ಪ್ರೊಡಕ್ಷನ್ಸ್ ಮೂಲಕ ‘ ಉರಿಗೌಡ ನಂಜೇಗೌಡ ‘ ಹೆಸರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಮೂಲಕ ಒಕ್ಕಲಿಗರ ಗೌರವವನ್ನು ಬೆಳ್ಳಿತೆರೆಯ ಮೇಲೆಯೂ ಮೂರಾಬಟ್ಟೆ ಮಾಡಲು ಸಂಚು ರೂಪಿಸಿದ್ದಾರೆ. ಉರಿಗೌಡ, ನಂಜೇಗೌಡ ಎಂಬ ಕಲ್ಪಿತ ಒಕ್ಕಲಿಗ ಹೆಸರುಗಳ ಸೃಷ್ಟಿ, ಸಿನಿಮಾ ಮಾಡುವ ದುರುಳ ಐಡಿಯಾ, ಒಕ್ಕಲಿಗರ ಮೇಲೆ ಬಿಜೆಪಿ ಬೀರುತ್ತಿರುವ ವಕ್ರದೃಷ್ಟಿ… ಇದೆಲ್ಲವೂ ಒಕ್ಕಲಿಗರನ್ನು ರಾಜಕೀಯವಾಗಿ ಮುಗಿಸಿಬಿಡುವ ರಕ್ಕಸ ಬಿಜೆಪಿಯ ಹಿಡೆನ್ ಅಜೆಂಡಾ ಅಲ್ಲದೆ ಮತ್ತೇನೂ ಅಲ್ಲ” .. ಈ ಸಿನಿಮಾ ಮಾಡಿದ್ರೆ ಸರ್ವನಾಶ ಆಗ್ತಾರೆ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.