ಬೆಂಗಳೂರು: ರಾಜಕಾರಣದಲ್ಲಿ ಯಾರೇ ಬಂದರೂ ಎದುರಿಸಬೇಕು, ಹೋರಾಡಬೇಕು. ರಾಜಕಾರಣದಲ್ಲಿ ಯಾರು ಯಾರ ವಿರುದ್ಧವಾದರೂ ನಿಲ್ಲಬಹುದು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುವ ವರುಣಾ ಕ್ಷೇತ್ರದಿಂದ ವಸತಿ ಸಚಿವ ವಿ.ಸೋಮಣ್ಣ ಹಾಗೂ ಡಿ.ಕೆ. ಶಿವಕುಮಾರ್ ಪ್ರತಿನಿಧಿಸುವ ಕನಕಪುರ ಕ್ಷೇತ್ರದಿಂದ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಕಣಕ್ಕಿಳಿಸುವ ಸಂಬಂಧ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಗಂಭೀರ ಚರ್ಚೆಯಾಗಿದೆ ಎನ್ನಲಾಗಿದೆ. ಈ ಬಗ್ಗೆ ಶೃಂಗೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ರಾಜಕಾರಣದಲ್ಲಿ ಯಾರೇ ಬಂದರೂ ಎದುರಿಸಬೇಕು, ಹೋರಾಡಬೇಕು. ರಾಜಕಾರಣದಲ್ಲಿ ಯಾರು ಯಾರ ವಿರುದ್ಧವಾದರೂ ನಿಲ್ಲಬಹುದು. ಅಶೋಕ್ ಸ್ಪರ್ಧೆ ಮಾಡುವುದಾದರೆ ಅವರಿಗೆ ನನ್ನ ಸ್ವಾಗತವಿದೆ. ಬಿಜೆಪಿಯವರ ಈ ದೊಡ್ಡ ನಿರ್ಧಾರವನ್ನು ನಾನು ಸ್ವಾಗತಿಸುವೆ. ಶಾರದಾಂಭೆ ದರ್ಶನಕ್ಕೆ ಬಂದಿದ್ದೇನೆ. ಇದರಲ್ಲಿ ರಾಜಕಾರಣ ಇಲ್ಲ. ಮೂರನೇ ಪಟ್ಟಿ ಚರ್ಚೆ ಆಗುತ್ತಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವಿ.ಸೋಮಣ್ಣ, ಇದು ಸತ್ಯಕ್ಕೆ ದೂರವಾದ ವಿಚಾರ. ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಯಾವುದೇ ಚರ್ಚೆ ಮಾಡಿಲ್ಲ. ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡುತ್ತೇನೆ ಎನ್ನುವುದು ವದಂತಿ. ಸಿದ್ದರಾಮಯ್ಯ ನಾವು ಒಟ್ಟಿಗೆ ರಾಜಕೀಯ ಪ್ರವೇಶ ಮಾಡಿದ್ದೇವೆ. ಸಿಎಂ ಆಗಿ ಅವರು ಹಲವು ಕೆಲಸ ಕಾರ್ಯ ಮಾಡಿದ್ದಾರೆ. ಚುನಾವಣೆಯಲ್ಲಿ ಯಾರು ನಿಲ್ಲುವುದು ಬಿಡುವುದು ಬಿಟ್ಟು ಇತಿಹಾಸ ನೋಡಬೇಕು. ಪಕ್ಷ ಯಾರನ್ನ ನಿಲ್ಲಿಸುತ್ತೋ ಅವರು ನಿಲ್ಲಬೇಕು. ಅದು ಸಾಂಕೇತಿಕವಾಗಿ ನಡೆಯುತ್ತಿರುತ್ತದೆ. ನಾನು ಸ್ಪರ್ಧೆ ಮಾಡುವ ಬಗ್ಗೆ ಪ್ರಶ್ನೆನೇ ಇಲ್ಲ ಎಂದು ಹೇಳಿದ್ದರು.