ಗಂಗಾವತಿ: ವೈರಿ ದೇಶಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೀಡುವಷ್ಟು ಪ್ರತ್ಯುತ್ತರ ಯಾವ ಪಕ್ಷಗಳಿಗೂ ನೀಡಲು ಸಾಧ್ಯವಿಲ್ಲ. ಕಾಂಗ್ರೆಸ್ ಗಂತೂ ಈ ವಿಷಯದಲ್ಲಿ ಗುಂಡಿಗೆ ಹಾಗೂ ಗಂಡಸ್ತನ ಎರಡೂ ಇಲ್ಲ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಮರಳಿ ಗ್ರಾಮದಲ್ಲಿ ಭಾನುವಾರ ಬಿಜೆಪಿ ಮಾಧ್ಯಮ ಪ್ರಕೋಷ್ಠದ ವತಿಯಿಂದ ನಡೆದ ಬಳ್ಳಾರಿ, ಕೊಪ್ಪಳ ವಿಜಯನಗರ ಹಾಗೂ ರಾಯಚೂರು ಜಿಲ್ಲೆಗಳ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿ, ಚುನಾವಣಾ ಯುದ್ದಕ್ಕೆ ಸಜ್ಜಾಗುವ ಸನ್ನಿವೇಶ ಇದಾಗಿದ್ದು , ದೇಶವನ್ನು ರಕ್ಷಣೆ ಮಾಡಲು ನರೇಂದ್ರ ಮೋದಿ ಸೇನಾಧಿಪತಿಯಂತೆ ಸಜ್ಜಾಗಿದ್ದಾರೆ. ನಾವೆಲ್ಲರೂ ಸೈನಿಕರಂತೆ ಅವರ ಕೈ ಬಲಪಡಿಸಬೇಕು. ಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರಿಸಬೇಕು. ದೇಶದಲ್ಲಿ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳುವ ಗುಂಡಿಗೆ ಇರುವುದು ಮೋದಿಗೆ ಮಾತ್ರ ಎಂದರು.
ಬಿಜೆಪಿ ಕೇವಲ ಸಾಮಾಜಿಕ ತಾಣಗಳ ಮೂಲಕ ಬೆಳೆದ ಪಕ್ಷವಲ್ಲ. ಜನಪರವಾಗಿ ಅಭಿವೃದ್ಧಿ ಕೆಲಸ ಮಾಡಿ, ಅನೇಕರ ತ್ಯಾಗ ಹಾಗೂ ಬಲಿದಾನದಿಂದ ಬೆಳೆದು ಬಂದಿದೆ. ಮುಂಬರುವ ದಿನಗಳಲ್ಲಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ವಿಜಯದ ಬಾವುಟ ಹಾರಿಸಲಿದೆ. ಕಾಂಗ್ರೆಸ್ ಕುಟುಂಬ ರಾಜಕಾರಣದ ಬೆನ್ನು ಹತ್ತಿದೆ. ಈ ಚುನಾವಣೆ ಕಾಂಗ್ರೆಸ್ ಅಂತ್ಯಕ್ಕೆ ಮುನ್ನುಡಿಯಾಗಲಿ ಎಂದರು.
ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದವರಲ್ಲಿ ಬಿ.ಎಸ್. ಯಡಿಯೂರಪ್ಪ ಪ್ರಮುಖರು. ಅವರು ನನಗೆ ಕೊಟ್ಟ ಮಾತಿನಂತೆ ವಿಜಯನಗರ ಜಿಲ್ಲೆ ರಚನೆ ಮಾಡಿಸಿಕೊಟ್ಟರು. ರಾಜ್ಯದಲ್ಲಿ ಗುಂಡಿಗೆ ಇರುವ ಗಂಡು ಯಡಿಯೂರಪ್ಪ ಎಂದರು.