ಟೆಹ್ರಾನ್: ಇರಾನ್‌ನ(Iran) ಆರ್ಥಿಕತೆ ಮತ್ತು ಆಹಾರದ ಅಗತ್ಯತೆಗಳ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮಾಡಿದ್ದ ಲೇವಡಿಗೆ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೇರ್ ಗಾಲಿಬಾಫ್(Mohammad Bagher Ghalibaf) ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಅಮೆರಿಕ ತನ್ನ ದೇಶದೊಳಗಿನ ಆಂತರಿಕ ಆಹಾರದ ಬಿಕ್ಕಟ್ಟನ್ನು ಮರೆತು, ಬೇರೆ ದೇಶದ ಕಡೆಗೆ ಬೆರಳು ತೋರುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಇತ್ತೀಚೆಗೆ ‘ಎಕ್ಸ್’ (ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಗಾಲಿಬಾಫ್, “ನಿಮ್ಮದೇ ದೇಶದ 4 ಕೋಟಿಗೂ ಹೆಚ್ಚು ನಾಗರಿಕರು ಸರ್ಕಾರದ ಉಚಿತ ಆಹಾರ ಧಾನ್ಯಗಳ ನೆರವನ್ನು (ಫುಡ್ ಸ್ಟ್ಯಾಂಪ್ಸ್) ಅವಲಂಬಿಸಿ ಬದುಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಂದು ದೇಶವನ್ನು ‘ಹಸಿದ ರಾಷ್ಟ್ರ’ ಎಂದು ಕರೆಯುತ್ತಿರುವುದು ಹಾಸ್ಯಾಸ್ಪದ. ಮೊದಲು ನಿಮ್ಮ ದೇಶದ ಅಪೌಷ್ಟಿಕತೆ ಪ್ರಮಾಣವನ್ನು ಗಮನಿಸಿ, ನಿಮ್ಮ ಸಲಹೆಗಳನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ” ಎಂದು ಟ್ರಂಪ್‌ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಟ್ರಂಪ್ ಹೇಳಿದ್ದೇನು?
ಖಾಸಗಿ ಸುದ್ದಿ ಸಂಸ್ಥೆಯೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ಇರಾನ್‌ನ ಆರ್ಥಿಕತೆ ಸಂಪೂರ್ಣವಾಗಿ ಕುಸಿದಿದೆ ಎಂದು ವಾದಿಸಿದ್ದರು. “ಇರಾನ್‌ನಲ್ಲಿ ಶೇಕಡಾ 300 ರಷ್ಟು ಹಣದುಬ್ಬರ ಇರಬಹುದು, ಅವರು ಯಾವುದೇ ಆದಾಯ ಗಳಿಸುತ್ತಿಲ್ಲ. ಅವರಿಗೆ ಆಹಾರದ ತೀವ್ರ ಅಗತ್ಯವಿದೆ. ಮೆಕ್ಕೆಜೋಳ, ಗೋಧಿ ಮತ್ತು ಸೋಯಾಬೀನ್‌ಗಳಂತಹ ಆಹಾರ ಪದಾರ್ಥಗಳನ್ನು ಇರಾನ್‌ಗೆ ರಫ್ತು ಮಾಡಲು ನಾವು ಆಶಿಸುತ್ತೇವೆ. ನಮ್ಮ ಅಮೆರಿಕದ ರೈತರೇ ಇದನ್ನು ಪೂರೈಸಲಿದ್ದಾರೆ” ಎಂದು ಟ್ರಂಪ್ ಹೇಳಿಕೆ ನೀಡಿದ್ದರು.
ಅಷ್ಟೇ ಅಲ್ಲದೆ, ಪ್ರಸ್ತುತ ನಡೆಯುತ್ತಿರುವ ರಾಜತಾಂತ್ರಿಕ ಮಾತುಕತೆಗಳಲ್ಲಿ ಅಮೆರಿಕದ ಬಹುತೇಕ ಎಲ್ಲಾ ನಿಬಂಧನೆಗಳಿಗೆ ಇರಾನ್ ಒಪ್ಪಿಕೊಂಡಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದರು. ಟೆಹ್ರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರಗಳನ್ನು ಹೊಂದಬಾರದು ಎನ್ನುವುದೇ ಈ ಮಾತುಕತೆಯ ಮುಖ್ಯ ಉದ್ದೇಶ ಎಂದು ಅವರು ಒತ್ತಿ ಹೇಳಿದ್ದರು.
ಅಮೆರಿಕದ ಆಹಾರ ವ್ಯವಸ್ಥೆಯಲ್ಲೇ ಇದೆ ಭಾರಿ ಲೋಪ!
ಇನ್ನೊಂದೆಡೆ, ಅಮೆರಿಕದ ‘ಸಪ್ಲಿಮೆಂಟಲ್ ನ್ಯೂಟ್ರಿಷನ್ ಅಸಿಸ್ಟೆನ್ಸ್ ಪ್ರೋಗ್ರಾಂ’ (SNAP) ಅಥವಾ ಫುಡ್ ಸ್ಟ್ಯಾಂಪ್ ಯೋಜನೆಯಲ್ಲಿ ಬಿಲಿಯನ್‌ಗಟ್ಟಲೆ ಡಾಲರ್ ಹಣ ಪೋಲಾಗುತ್ತಿದೆ ಎಂದು ಸ್ವತಃ ಟ್ರಂಪ್ ಆಡಳಿತ ಒಪ್ಪಿಕೊಂಡಿದೆ. ವರದಿಗಳ ಪ್ರಕಾರ, ಇಲಾಖೆಯ ತಪ್ಪು ಪಾವತಿಗಳು ಮತ್ತು ನಿರ್ವಹಣಾ ಲೋಪಗಳಿಂದಾಗಿ ಈ ವ್ಯವಸ್ಥೆಯಲ್ಲಿ ಭಾರಿ ನಷ್ಟ ಸಂಭವಿಸುತ್ತಿದೆ.
ಅಮೆರಿಕದ ಕೃಷಿ ಇಲಾಖೆಯ ಪ್ರಕಾರ, 2025ರ ಹಣಕಾಸು ವರ್ಷದಲ್ಲಿ ಈ ಯೋಜನೆಯಲ್ಲಿನ ಪಾವತಿ ದೋಷದ ಪ್ರಮಾಣವು ಶೇಕಡಾ 10.6 ರಷ್ಟಿತ್ತು. ಅಂದರೆ, ಇಡೀ ಯೋಜನೆಯ ಒಟ್ಟು ವೆಚ್ಚದಲ್ಲಿ ಸರಿಸುಮಾರು 10 ಬಿಲಿಯನ್ ಡಾಲರ್‌ಗಿಂತಲೂ (ಸುಮಾರು 80,000 ಕೋಟಿ ರೂ.) ಹೆಚ್ಚು ಹಣ ತಪ್ಪಾದ ಹಂಚಿಕೆಗೆ ಬಲಿಯಾಗಿದೆ. ದೇಶದೊಳಗೇ ಇಷ್ಟೊಂದು ದೊಡ್ಡ ಮಟ್ಟದ ಆಹಾರ ಮತ್ತು ಆರ್ಥಿಕ ಸವಾಲುಗಳಿರುವಾಗ ಟ್ರಂಪ್ ಇರಾನ್ ವಿರುದ್ಧ ಹೇಳಿಕೆ ನೀಡಿರುವುದು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ಸಿಲಿಕಾನ್ ಸಿಟಿಯಲ್ಲಿ ವಾಹನಗಳ ಅಬ್ಬರ- ನಿತ್ಯ ರಸ್ತೆಗಿಳಿಯುತ್ತಿವೆ 3 ಸಾವಿರ ಹೊಸ ಗಾಡಿಗಳು