ಕಾರವಾರ: ಮಧ್ಯಪ್ರಾಚ್ಯದಲ್ಲಿ (Middle East) ನಡೆಯುತ್ತಿರುವ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯನ್ನು (Hormuz Strait) ಈಗಾಗಲೇ ಬಂದ್ ಮಾಡಲಾಗಿದೆ. ಹೀಗಾಗಿ ಹಲವಾರು ಹಡಗುಗಳು ನಿಂತಲ್ಲೇ ನಿಂತಿವೆ. ಇದರಿಂದ ದೇಶದಲ್ಲಿ ಸಾಕಷ್ಟು ಸಮಸ್ಯೆಗಳು ಉದ್ಭವಿಸಿದೆ. ಈ ಹೊತ್ತಲ್ಲೇ ಯುಎಇಯಿಂದ ಕಾರವಾರ ಬಂದರಿಗೆ (Karwar Port) ಹಡಗೊಂದು ಆಗಮಿಸಿದೆ.
ಹೌದು.. ಯುಎಇಯಿಂದ ಚೆಂಗ್ ಎಕ್ಸ್ ಎನ್ನುವ ಹಡಗು ಬಿಟುಮಿನ್ ಅನ್ನು ಕಾರವಾರಕ್ಕೆ ಹೊತ್ತು ತಂದಿದೆ. ಸುಮಾರು 5.500 ಸಾವಿರ ಟನ್ ಸಾಮರ್ಥ್ಯದ ಹಡಗು 3,100 ಟನ್ ಬಿಟುಮಿನ್ ತಂದಿದೆ. ಹರ್ಮುಜ್ ಜಲಸಂಧಿಯಿಂದ ಹಡಗು ಬರುವುದಕ್ಕೆ ಇರಾನ್ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಚೆಂಗ್ ಎಕ್ಸ್ ಹಡಗು UAEಯ ಕೋರ್ಪಕಾನ್ನಿಂದ ಕಾರವಾರಕ್ಕೆ ಆಗಮಿಸಿದೆ.
ಕಳೆದ ಮಾರ್ಚ್ 3 ರಂದು ಯುಎಇ ಕೋರ್ಪಕಾನ್ನಿಂದ ಈ ಹಡಗು ಹೊರಟಿತ್ತು. ಇದೀಗ ಇಂದು (ಮಾರ್ಚ್ 13) ಕಾರವಾರ ಬಂದರಿಗೆ ಆಗಮಿಸಿದ್ದು, ಇಂದು ಸಂಜೆ ಮತ್ತೆ ವಾಪಸ್ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಕಾರವಾರ ಬಂದರಿನಿಂದ ವಾಪಸ್ ಆಗುವ ಹಡಗು, ಇಲ್ಲಿಂದ ಎಲ್ಲಿಗೆ ಹೋಗಲಿದೆ ಎಂಬ ಮಾಹಿತಿ ಬಂದಿಲ್ಲ ಎಂದ ಚೆಂಗ್ ಎಕ್ಸ್ ಶಿಪ್ನ ಉದ್ಯೋಗಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಇರಾನ್ ಯುಕ್ತಿಗೆ ನಲುಗಿದ ದೊಡ್ಡಣ್ಣ.. ಅಬ್ರಹಾಂ ಲಿಂಕನ್ ಜಸ್ಟ್ಮಿಸ್! ಏನೂ ಆಗಿಲ್ಲ ಎಂದ ಅಮೆರಿಕ
ಏನಿದು ಬಿಟುಮಿನ್?: ಬಿಟುಮಿನ್ ಎಂಬುದು ಕಚ್ಚಾ ತೈಲ ಸಂಸ್ಕರಣೆಯ ಅಂತಿಮ ಉತ್ಪನ್ನವಾಗಿದ್ದ, ಕಚ್ಚಾ ಡಾಂಬರ್ ಎಂದು ಕೂಡ ಕರೆಯಲಾಗುತ್ತದೆ. ಇದು ಕಪ್ಪು, ಅಂಟು ಮತ್ತು ಜಲನಿರೋಧಕ ಗುಣಗಳನ್ನು ಹೊಂದಿರುವ ಹೈಡ್ರೋಕಾರ್ಬನ್ ಮಿಶ್ರಣವಾಗಿದೆ. ಇದನ್ನು ಮುಖ್ಯವಾಗಿ ರಸ್ತೆ ನಿರ್ಮಾಣ, ಛಾವಣಿ, ಮತ್ತು ಜಲನಿರೋಧಕ ಕಾರ್ಯಗಳಿಗೆ ಬಳಸಲಾಗುತ್ತದೆ. ಇದು ನೈಸರ್ಗಿಕವಾಗಿಯೂ ದೊರೆಯುತ್ತದೆ ಮತ್ತು ಸಂಸ್ಕರಣಾಗಾರಗಳಲ್ಲಿ ಕೃತಕವಾಗಿ ತಯಾರಿಸಲಾಗುತ್ತದೆ.
ಇರಾನ್‌ನಿಂದ ಕಾರವಾರಕ್ಕೆ ಬರುತ್ತಿಲ್ಲ ಕಚ್ಚಾ ಡಾಂಬರ್: ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಕರ್ನಾಟಕದ ಕರಾವಳಿಯ ವಾಣಿಜ್ಯ ಬಂದರಿಗೆ ದೊಡ್ಡ ಹೊಡೆತ ಬಿದ್ದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವಾಣಿಜ್ಯ ಬಂದರಿನಲ್ಲಿ ಇರಾಕ್ ಹಾಗೂ ಮಧ್ಯಪ್ರಾಚ್ಯ ದೇಶದಿಂದ ಬರುವ ಕಚ್ಚಾ ಡಾಂಬರ್, ಡಿಸೇಲ್, ಪಾಮ್ ಆಯಿಲ್‌ಗಳ ಸರಬರಾಜು ಬಂದ್ ಆಗಿವೆ. ವಾಣಿಜ್ಯ ಬಂದರಿನಲ್ಲಿ ಶಿಪ್‌ಗಳಿಲ್ಲದೇ ಬಿಕೋ ಎನ್ನುತಿದ್ದು, ನಷ್ಟ ತಂದೊಡ್ಡಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಧ್ಯಪ್ರಾಚ್ಯ ಯುದ್ಧ ಸಂಘರ್ಷದ ಪರಿಣಾಮ ವಾಣಿಜ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಇರಾನ್‌ನಿಂದ ಕಾರವಾರದ ವಾಣಿಜ್ಯ ಬಂದರಿಗೆ ಬರುತ್ತಿದ್ದ ಕಚ್ಚಾ ಡಾಂಬರ್ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದ ತಿಂಗಳಿಗೆ 80 ಲಕ್ಷ ರೂಪಾಯಿಗಳವರೆಗೂ ನಷ್ಟವಾಗುತ್ತಿದೆ ಎಂದು ತಿಳಿದು ಬಂದಿದೆ.
ಪ್ರತಿ ತಿಂಗಳು 70 ರಿಂದ 80 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಕಾರವಾರದ ವಾಣಿಜ್ಯ ಬಂದರಿನಲ್ಲಿ ಡಾಂಬರ್ ಲಾರಿಗಳು ಸಾಲುಗಟ್ಟಿ ನಿಂತಿವೆ. ನೌಕಾ ನೆಲೆಗೆ ಸರಬರಾಜಾಗುವ ಡೀಸೆಲ್‌ಗೂ ಸಂಕಷ್ಟ ಎದುರಾಗಿದೆ.
ಇರಾನ್‌ನಿಂದ ಪ್ರತಿ ತಿಂಗಳು ಕಾರವಾರದ ಬಂದರಿಗೆ ಕಚ್ಚಾ ಡಾಂಬರ್ ಬರುತ್ತಿತ್ತು. ಗಲ್ಫ್ ರಾಷ್ಟ್ರದಿಂದ ಬರುತ್ತಿದ್ದ ಡೀಸೆಲ್‌ಗೂ ಸಂಕಷ್ಟ ಎದುರಾಗಿದೆ. ಹಡಗುಗಳಿಲ್ಲದೇ ಕಾರವಾರ ವಾಣಿಜ್ಯ ಬಂದರು ಬಿಕೋ ಎನ್ನುತ್ತಿದೆ.