Monday, June 15, 2026
Homeಟಾಪ್ ನ್ಯೂಸ್BIG NEWS: ಮಧ್ಯಪ್ರಾಚ್ಯ ಸಂಘರ್ಷದ ಎಫೆಕ್ಟ್, ಯುಎಇ ಹಿಂದಿಕ್ಕಿ ಭಾರತದ 2ನೇ ಅತಿದೊಡ್ಡ ರಫ್ತು ಮಾರುಕಟ್ಟೆಯಾದ...

BIG NEWS: ಮಧ್ಯಪ್ರಾಚ್ಯ ಸಂಘರ್ಷದ ಎಫೆಕ್ಟ್, ಯುಎಇ ಹಿಂದಿಕ್ಕಿ ಭಾರತದ 2ನೇ ಅತಿದೊಡ್ಡ ರಫ್ತು ಮಾರುಕಟ್ಟೆಯಾದ ಸಿಂಗಾಪುರ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ (Middle East) ಭುಗಿಲೆದ್ದಿರುವ ಸಂಘರ್ಷದ ಹಿನ್ನೆಲೆಯಲ್ಲಿ ಭಾರತದ ವಿದೇಶಿ ವ್ಯಾಪಾರ ವಲಯದಲ್ಲಿ ಮಹತ್ವದ ಬದಲಾವಣೆ ಆಗಿದೆ. ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಕಾರಣದಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ದೇಶವನ್ನು ಹಿಂದಿಕ್ಕಿರುವ ಸಿಂಗಾಪುರವು (Singapore) ಈಗ ಭಾರತದ (India) ಎರಡನೇ ಅತಿ ದೊಡ್ಡ ರಫ್ತು ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆಯೂ ಅಮೆರಿಕ (USA) ಭಾರತದ ಅತಿ ದೊಡ್ಡ ರಫ್ತು ದೇಶವಾಗಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.

ಹಾರ್ಮುಜ್ ಬಂದ್ ಬದಲಾದ ವ್ಯಾಪಾರ ಮಾರ್ಗ
ಮಾರ್ಚ್ ತಿಂಗಳಿನಿಂದ ಇರಾನ್ ಮತ್ತು ಒಮಾನ್ ನಡುವಿನ ಆಯಕಟ್ಟಿನ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿ (Strait of Hormuz) ಬಹುತೇಕ ಮುಚ್ಚಿಹೋಗಿರುವುದು ಜಾಗತಿಕ ಇಂಧನ ಮತ್ತು ಸರಕು ಸಾಗಣೆಗೆ ಭಾರಿ ಹೊಡೆತ ನೀಡಿದೆ. ಜಾಗತಿಕ ತೈಲ ಸಾಗಣೆಯ ಐದನೇ ಒಂದು ಭಾಗವನ್ನು ನಿಯಂತ್ರಿಸುವ ಈ ಮಾರ್ಗ ಸ್ಥಗಿತಗೊಂಡಿದ್ದರಿಂದ, ಭಾರತೀಯ ರಫ್ತುದಾರರು ಪರ್ಯಾಯ ಮಾರ್ಗಗಳನ್ನು ಹುಡುಕಲಾರಂಭಿಸಿದ್ದಾರೆ. ಇದರ ನೇರ ಪರಿಣಾಮವಾಗಿ ಭಾರತವು ಮುಕ್ತ ವ್ಯಾಪಾರ ಒಪ್ಪಂದ (FTA) ಹೊಂದಿರುವ ಎರಡು ಪ್ರಮುಖ ಸಾರಿಗೆ ಹಬ್‌ಗಳಾದ ಯುಎಇ ಮತ್ತು ಸಿಂಗಾಪುರ ನಡುವಿನ ವ್ಯಾಪಾರದ ಹರಿವಿನಲ್ಲಿ ಭಾರಿ ವ್ಯತ್ಯಾಸವಾಗಿದೆ.

ಸಿಂಗಾಪುರಕ್ಕೆ ಭಾರಿ ಜಿಗಿತ –ಯುಎಇ ಕುಸಿತ
ಏಪ್ರಿಲ್ ತಿಂಗಳಿನಲ್ಲಿ ಭಾರತದಿಂದ ಸಿಂಗಾಪುರಕ್ಕೆ ನಡೆದ ರಫ್ತು ಪ್ರಮಾಣವು ಶೇಕಡಾ 180 ರಷ್ಟು ಭಾರಿ ಜಿಗಿತ ಕಂಡಿದ್ದು, 3.20 ಬಿಲಿಯನ್ ಡಾಲರ್ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು ಕೇವಲ 1.14 ಬಿಲಿಯನ್ ಡಾಲರ್ ಆಗಿತ್ತು. ಮತ್ತೊಂದೆಡೆ, ಯುಎಇ ದೇಶಕ್ಕೆ ಆಗುತ್ತಿದ್ದ ಭಾರತದ ರಫ್ತು ಪ್ರಮಾಣವು ಶೇಕಡಾ 36 ರಷ್ಟು ಕುಸಿದಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 3.43 ಬಿಲಿಯನ್ ಡಾಲರ್ ಇದ್ದ ರಫ್ತು, ಈ ಬಾರಿ 2.18 ಬಿಲಿಯನ್ ಡಾಲರ್‌ಗೆ ಇಳಿಕೆಯಾಗಿದೆ.

ಆಮದು ಕ್ಷೇತ್ರದಲ್ಲೂ ದೊಡ್ಡ ಬದಲಾವಣೆ
ಸಾಂಪ್ರದಾಯಿಕ ಇಂಧನ ಪೂರೈಕೆ ಮಾರ್ಗಗಳು ಮುಚ್ಚಿ ಹೋಗಿರುವುದರಿಂದ ಭಾರತವು ಆಮದಿಗಾಗಿ ಹೊಸ ಮಾರುಕಟ್ಟೆಗಳನ್ನು ಆಶ್ರಯಿಸುತ್ತಿದೆ. ಇಂಧನ ರಫ್ತು ಮಾಡುವ ದೇಶಗಳಾದ ಒಮಾನ್, ಪೆರು ಮತ್ತು ನೈಜೀರಿಯಾ ದೇಶಗಳು ಭಾರತದ ಟಾಪ್ 20 ಆಮದು ಮೂಲಗಳ ಪಟ್ಟಿಗೆ ಲಗ್ಗೆ ಇಟ್ಟಿವೆ. ಒಮಾನ್‌ನಿಂದ ಭಾರತಕ್ಕೆ ಆಗುವ ಆಮದು ಏಪ್ರಿಲ್‌ನಲ್ಲಿ ಮೂರು ಪಟ್ಟು ಹೆಚ್ಚಾಗಿದ್ದು, 1.48 ಬಿಲಿಯನ್ ಡಾಲರ್‌ಗೆ ತಲುಪಿದೆ. ಕತಾರ್‌ನಿಂದ ಆಮದು ಶೇ. 47 ರಷ್ಟು ಕುಸಿದಿದ್ದರೆ, ಸೌದಿ ಅರೇಬಿಯಾದಿಂದ ಆಗುವ ಆಮದು ಏಪ್ರಿಲ್‌ನಲ್ಲಿ ಚೇತರಿಕೆ ಕಂಡು 3.85 ಬಿಲಿಯನ್ ಡಾಲರ್‌ಗೆ ತಲುಪಿದೆ.

ರೂಪಾಯಿ ಮೌಲ್ಯ ಕುಸಿತ ಸರ್ಕಾರದ ಕಟ್ಟುನಿಟ್ಟಿನ ಕ್ರಮ
ಜಾಗತಿಕವಾಗಿ ಇಂಧನ ಬೆಲೆಗಳು ಗಗನಕ್ಕೇರಿರುವುದು ಭಾರತದ ಆಮದು ವೆಚ್ಚವನ್ನು ಹೆಚ್ಚಿಸಿದೆ. ಇದರ ನೇರ ಪರಿಣಾಮವಾಗಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಫೆಬ್ರವರಿ ಕೊನೆಯಿಂದ ಶೇಕಡಾ 5.2 ರಷ್ಟು ಕುಸಿದು ಸಾರ್ವಕಾಲಿಕ ಕುಸಿತ ಕಂಡಿದೆ. ವಿದೇಶಿ ವಿನಿಮಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಭಾರತ ಸರ್ಕಾರವು ಚಿನ್ನ ಸೇರಿದಂತೆ ಅಮೂಲ್ಯ ಲೋಹಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದೆ ಹಾಗೂ ತೈಲ ಕಂಪನಿಗಳು ದೇಶೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಏರಿಕೆ ಮಾಡಿವೆ.

ಇದನ್ನೂ ಓದಿ: ಇರಾನ್ ದಾಳಿ ವೇಳೆ ಯುಎಇ ರಕ್ಷಣೆಗೆ ಧಾವಿಸಿದ ಇಸ್ರೇಲ್: ಅಬುಧಾಬಿಯಲ್ಲಿ ‘ಐರನ್ ಡೋಮ್’ ನಿಯೋಜನೆ!

ಹೆಚ್ಚಿನ ಸುದ್ದಿ

Change Language »
error: Content is protected !!