Wednesday, August 19, 2026
Homeಟಾಪ್ ನ್ಯೂಸ್META: ಹಣ ಪಡೆದು ಕಂಟೆಂಟ್ ಬೂಸ್ಟಿಂಗ್ ; ಕೃತ್ಯ ಒಪ್ಪಿಗೊಂಡ ಮೆಟಾ

META: ಹಣ ಪಡೆದು ಕಂಟೆಂಟ್ ಬೂಸ್ಟಿಂಗ್ ; ಕೃತ್ಯ ಒಪ್ಪಿಗೊಂಡ ಮೆಟಾ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ವೀಡಿಯೊವನ್ನು ತಾತ್ಕಾಲಿಕವಾಗಿ ತೆಗೆದುಹಾಕಿದ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಸಮನ್ಸ್ ಪಡೆದಿದ್ದ ಮೆಟಾ (Meta) ಸಂಸ್ಥೆಯ ಜಾಗತಿಕ ತಂಡವು ಬುಧವಾರ ಐಟಿ ಸಚಿವ ಅಶ್ವಿನಿ ವೈಷ್ಣವ್ ಮತ್ತು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಈ ಸಭೆಯಲ್ಲಿ ಮೆಟಾ ಅಧಿಕಾರಿಗಳು ಅನೇಕ ವಿಚಾರಗಳನ್ನ ಒಪ್ಪಿಕೊಂಡಿದ್ದು, ವಿಷಯಗಳನ್ನು ‘ಬೂಸ್ಟ್’ ಮಾಡಲು ಭಾರಿ ಪ್ರಮಾಣದ ಹಣವನ್ನು ಪಾವತಿಸಲಾಗುತ್ತಿತ್ತು ಎಂದು ಹೇಳಿದೆ.

ಇನ್ನು ಈ ಉನ್ನತ ಮಟ್ಟದ ಸಭೆಯ ವೇಳೆ ಮೆಟಾ ಸಂಸ್ಥೆಯ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಅವರು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಕಂಡುಬಂದ ಬಾಲ ಲೈಂಗಿಕ ದೌರ್ಜನ್ಯ ವಿಷಯಗಳು (CSEAM), ಡಿಪ್‌ಫೇಕ್ ವಿಷಯಗಳು ಮತ್ತು ತಾಂತ್ರಿಕ ಪ್ರಮಾದಗಳಿಗಾಗಿ ಕ್ಷಮೆಯಾಚಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿದೆ. 45 ನಿಮಿಷಗಳ ಕಾಲ ನಡೆದ ಈ ಸುದೀರ್ಘ ಸಭೆಯಲ್ಲಿ ಮೆಟಾದ ಜಾಗತಿಕ ವ್ಯವಹಾರಗಳ ಅಧಿಕಾರಿ ಜೋಯಲ್ ಕಪ್ಲಾನ್ ಸೇರಿದಂತೆ ಪ್ರಮುಖ ಕಾರ್ಯನಿರ್ವಾಹಕರು ಐಟಿ ಕಾರ್ಯದರ್ಶಿ ಎಸ್. ಕೃಷ್ಣನ್ ಹಾಗೂ ಇತರೆ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ವಿವರಣೆ ನೀಡಿದ್ದಾರೆ.

ಏನಿದು ಪ್ರಧಾನಿ ಮೋದಿ ವಿಡಿಯೋ ವಿವಾದ?

ಆನ್‌ಲೈನ್ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಯ ಸಮಯದಲ್ಲಿ ಪ್ರಧಾನಿ ಮೋದಿ ಅವರು ಜುಲೈ 23 ರಂದು ಹಂಚಿಕೊಂಡಿದ್ದ ವೀಡಿಯೊವನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಿಂದ ತಾತ್ಕಾಲಿಕವಾಗಿ ತೆಗೆದುಹಾಕಲಾಗಿತ್ತು. ತಾಂತ್ರಿಕ ದೋಷದಿಂದಾಗಿ ಈ ಪ್ರಮಾದ ಸಂಭವಿಸಿದೆ ಎಂದು ಮೆಟಾ ನೀಡಿದ ವಿವರಣೆಯನ್ನು ಐಟಿ ಸಚಿವಾಲಯವು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿಯು ಮೆಟಾ ಸಂಸ್ಥೆಗೆ ಸಮನ್ಸ್ ನೀಡಿ ಕ್ಷಮೆಯಾಚಿಸುವಂತೆ ಸೂಚಿಸಿತ್ತು. ಸಭೆಯ ವೇಳೆ ಕೆಲವು ನಿರ್ದಿಷ್ಟ ವಿಷಯಗಳನ್ನು ‘ಬೂಸ್ಟ್’ ಮಾಡಲು ಭಾರಿ ಪ್ರಮಾಣದ ಹಣವನ್ನು ಪಾವತಿಸಲಾಗುತ್ತಿತ್ತು ಮತ್ತು ಕಾನೂನುಬಾಹಿರ ವಿಷಯಗಳನ್ನು ಪ್ರಚಾರ ಮಾಡಲಾಗಿದೆ ಎಂಬ ತಪ್ಪನ್ನು ಮೆಟಾ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ಸೇಫ್ ಹಾರ್ಬರ್ ಮೆಟಾಗೆ ಅನ್ವಯಿಸಲ್ಲ

ಇದೇ ವೇಳೆ ಭಾರತೀಯ ಐಟಿ ಕಾಯ್ದೆಯಡಿ ಲಭ್ಯವಾಗುವ ‘ಸೇಫ್ ಹಾರ್ಬರ್’ (Safe Harbour) ರಕ್ಷಣೆಯು ಮೆಟಾಗೆ ಅನ್ವಯಿಸುವುದಿಲ್ಲ ಮತ್ತು ಸಂಸ್ಥೆಯನ್ನು ಕೇವಲ ‘ಮಧ್ಯವರ್ತಿ’ (Intermediary) ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ. ಏಕೆಂದರೆ ಬಳಕೆದಾರರಿಗೆ ಯಾವ ರೀತಿಯ ವಿಷಯಗಳನ್ನು ತಲುಪಿಸಬೇಕು ಎಂಬುದನ್ನು ಮೆಟಾ ಪ್ಲಾಟ್‌ಫಾರ್ಮ್‌ಗಳೇ ನಿರ್ಧರಿಸುತ್ತವೆ. ಜಗತ್ತಿನಲ್ಲೇ ಭಾರತವು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಾಪ್‌ ಬಳಕೆದಾರರ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಾಲ ಲೈಂಗಿಕ ಶೋಷಣೆ ಮತ್ತು ಮಹಿಳೆಯರನ್ನು ಹಗುರವಾಗಿ ಬಿಂಬಿಸುವ ವಿಷಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರ ಸ್ಪಷ್ಟ ಎಚ್ಚರಿಕೆ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಟಾ ಅಧಿಕಾರಿಗಳನ್ನು ಶೀಘ್ರದಲ್ಲೇ ಮತ್ತೊಮ್ಮೆ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.

ಇದನ್ನೂ ಓದಿ: ಭಾರತ ಸರ್ಕಾರದ ಮುಂದೆ ಕ್ಷಮೆಯಾಚಿಸಿದ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್!

ಹೆಚ್ಚಿನ ಸುದ್ದಿ

Change Language »
error: Content is protected !!