ನವದೆಹಲಿ: ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಮುಟ್ಟಿನ ನೈರ್ಮಲ್ಯ ನಿರ್ವಹಣೆಗಾಗಿ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಅನುಷ್ಠಾನಗೊಳಿಸಬಹುದಾದ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಮತ್ತು ರಾಷ್ಟ್ರೀಯ ಮಾದರಿಯೊಂದನ್ನು ಸಿದ್ಧಪಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪಾರ್ದಿವಾಲ ಅವರನ್ನು ಒಳಗೊಂಡ ಪೀಠ, ರಾಷ್ಟ್ರೀಯ ನೀತಿ ನಿರೂಪಣೆಗೆ ಸಂಬಂಧಿತ ದತ್ತಾಂಶ ಸಂಗ್ರಹಣೆ ಮತ್ತು ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದೆ.
ಇದನ್ನು ಅತ್ಯಂತ ಮಹತ್ವದ ವಿಷಯ ಎಂದು ಪರಿಗಣಿಸಿರುವ ಸುಪ್ರೀಂ ಕೋರ್ಟ್, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಏಕರೂಪದ ರಾಷ್ಟ್ರೀಯ ನೀತಿ ಜಾರಿಗೆಗೆ ಎಲ್ಲಾ ಇಲಾಖೆ ಮತ್ತು ಸಂಘಸಂಸ್ಥೆಗಳೊಂದಿಗೆ ತೊಡಗಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ಇದೇ ವೇಳೆ ಈಗಾಗಲೇ ಮುಟ್ಟಿನ ನೈರ್ಮಲ್ಯಕ್ಕಾಗಿ ಜಾರಿಗೊಳಿಸಿರುವ ಯೋಜನೆಗಳ ಕುರಿತು ವರದಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.