ಶಿಲ್ಲಾಂಗ್: ದೇಶದ ಪ್ರಮುಖ ನಗರಗಳಲ್ಲಿ ಕೇವಲ ಹತ್ತೇ ನಿಮಿಷಗಳಲ್ಲಿ ಗ್ರಾಹಕರ ಮನೆಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಮೂಲಕ ಜನಪ್ರಿಯತೆ ಗಳಿಸಿರುವ ಕ್ವಿಕ್ ಕಾಮರ್ಸ್ ದೈತ್ಯ ಬ್ಲಿಂಕಿಟ್ (Blinkit) ಕಂಪನಿಗೆ ಮೇಘಾಲಯದಲ್ಲಿ ಹಿನ್ನಡೆಯಾಗಿದೆ. ಸ್ಥಳೀಯ ಸಣ್ಣ ವ್ಯಾಪಾರಿಗಳ ಹಿತಾಸಕ್ತಿ ಕಾಯುವ ನಿಟ್ಟಿನಲ್ಲಿ ಮೇಘಾಲಯದಾದ್ಯಂತ ಬ್ಲಿಂಕಿಟ್ ಕಂಪನಿಯ ಕಾರ್ಯಾಚರಣೆಯನ್ನು ನಿರ್ಬಂಧಿಸಲಾಗಿದೆ.
ರಾಷ್ಟ್ರಮಟ್ಟದಲ್ಲಿ ಕ್ವಿಕ್ ಕಾಮರ್ಸ್ ಕಂಪನಿಗಳ ಭರಾಟೆಯಿಂದಾಗಿ ಸಾವಿರಾರು ಸಾಂಪ್ರದಾಯಿಕ ಕಿರಾಣಿ ಅಂಗಡಿಗಳು ಹಾಗೂ ಸಣ್ಣ ಉದ್ಯಮಗಳು ಶಾಶ್ವತವಾಗಿ ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಈ ಆರ್ಥಿಕ ಹೊಡೆತ ಮೇಘಾಲಯದ ಮೇಲಾಗುವುದನ್ನು ತಡೆಯಲು ಈ ಕಠಿಣ ಕ್ರಮ ಕೈಗೊಂಡಿದೆ.
4 ಸಾವಿರ ಕಿರಾಣಿ ಅಂಗಡಿಗಳ ಉಳಿವಿಗೆ ಪರವಾನಗಿ ನಿರಾಕರಣೆ
ಮೇಘಾಲಯದ ಶಿಲ್ಲಾಂಗ್ ಸೇರಿದಂತೆ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಸುಮಾರು 4,000ಕ್ಕೂ ಹೆಚ್ಚು ಸ್ಥಳೀಯ ಹಾಗೂ ಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ಕಿರಾಣಿ ಅಂಗಡಿಗಳಿವೆ. ಬ್ಲಿಂಕಿಟ್‌ನಂತಹ ಕಂಪನಿಗಳು ಮಾರುಕಟ್ಟೆಗೆ ಪ್ರವೇಶಿಸಿ, ರಿಯಾಯಿತಿ (ಡಿಸ್ಕೌಂಟ್) ಹಾಗೂ ಕ್ಷಣಾರ್ಧದ ಡೆಲಿವರಿ ಆಫರ್ ನೀಡಲು ಆರಂಭಿಸಿದರೆ ಸ್ಥಳೀಯ ಬಡ ವ್ಯಾಪಾರಿಗಳ ಬದುಕು ಬೀದಿಗೆ ಬೀಳುತ್ತದೆ. ಈ ಕಾರಣಕ್ಕಾಗಿ ಅಲ್ಲಿನ ಪ್ರಭಾವಿ ಆಡಳಿತ ಮಂಡಳಿಯಾದ ಖಾಸಿ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿಯು (KHADC) ಬ್ಲಿಂಕಿಟ್ ಕಂಪನಿಗೆ ವ್ಯವಹಾರ ನಡೆಸಲು ನೀಡಬೇಕಾದ ಟ್ರೇಡಿಂಗ್ ಲೈಸೆನ್ಸ್ (ವ್ಯಾಪಾರ ಪರವಾನಗಿ) ನೀಡಲು ನಿರಾಕರಿಸಿದೆ .
ಸಿದ್ಧತೆ ಮಾಡಿಕೊಂಡಿದ್ದ ಬ್ಲಿಂಕಿಟ್‌ಗೆ ಶಾಕ್!
KHADC ಕೈಗೊಂಡಿರುವ ಈ ನಿರ್ಧಾರದಿಂದಾಗಿ ಬ್ಲಿಂಕಿಟ್ ಕಂಪನಿಗೆ ಆರ್ಥಿಕ ನಷ್ಟ ಉಂಟಾಗಿದೆ. ಕಂಪನಿಯು ಈಗಾಗಲೇ ಶಿಲ್ಲಾಂಗ್ ನಗರದಲ್ಲಿ ತನ್ನ ಉದ್ಯಮ ಆರಂಭಿಸಲು ಗೋದಾಮುಗಳು ಸೇರಿದಂತೆ ಎಲ್ಲಾ ಪ್ರಾಥಮಿಕ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಅಷ್ಟೇ ಅಲ್ಲದೆ, ಸರಬರಾಜು ಪ್ರಕ್ರಿಯೆಗಾಗಿ ನೂರಾರು ಸ್ಥಳೀಯ ಯುವಕರನ್ನು ಡೆಲಿವರಿ ಪಾರ್ಟ್‌ನರ್ಸ್ ಆಗಿ ನಿಯೋಜಿಸಿಕೊಂಡು ತರಬೇತಿ ಕೂಡ ನೀಡಿತ್ತು. ಆದರೆ, ಇದೀಗ ಸ್ವಾಯತ್ತ ಮಂಡಳಿಯಿಂದ ಲೈಸೆನ್ಸ್ ಸಿಗದ ಕಾರಣ ಅನಿವಾರ್ಯವಾಗಿ ತನ್ನ ಎಲ್ಲಾ ಕಾರ್ಯಾಚರಣೆಗಳನ್ನು ಶಿಲ್ಲಾಂಗ್‌ನಲ್ಲಿ ಸ್ಥಗಿತಗೊಳಿಸಬೇಕಾದ ಸ್ಥಿತಿ ಎದುರಾಗಿದೆ. ಸ್ಥಳೀಯ ಬುಡಕಟ್ಟು ಜನರ ಉದ್ಯೋಗ ಮತ್ತು ಸಾಂಪ್ರದಾಯಿಕ ಮಾರುಕಟ್ಟೆಯನ್ನು ಕಾರ್ಪೊರೇಟ್ ಕಂಪನಿಗಳಿಂದ ರಕ್ಷಿಸಲು ಮೇಘಾಲಯ ಸರ್ಕಾರ ಮತ್ತು ಜಿಲ್ಲಾ ಮಂಡಳಿ ಕೈಗೊಂಡಿರುವ ಈ ಹೆಜ್ಜೆ ದೇಶದ ಗಮನ ಸೆಳೆದಿದೆ.
ಇದನ್ನೂ ಓದಿ: ಡಿಜಿಟಲ್ ಗಾಸಿಪ್, ಯೂಟ್ಯೂಬ್ ಲಿಂಕ್ ಇಟ್ಟುಕೊಂಡು ಪಿಐಎಲ್ ಸಲ್ಲಿಸುವಂತಿಲ್ಲ!