ಕೋರ್ಟ್ ಆವರಣದಲ್ಲಿರುವ ಮಸೀದಿಯನ್ನು ತೆರವುಗೊಳಿಸುವ ಕುರಿತು 2017ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಎಂ.ಆರ್ ಶಾ ಮತ್ತು ಸಿ.ಟಿ ರವಿಕುಮಾರ್ ಅವರನ್ನೊಳಗೊಂಡ ಪೀಠವು, ಹೈಕೋರ್ಟ್ ಮಸೀದಿ ವಕ್ಫ್ ಬೋರ್ಡ್ ಮತ್ತು ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ. ಅಲ್ಲದೆ, ಮಸೀದಿಯನ್ನು ಅಲಹಾಬಾದ್ ಹೈಕೋರ್ಟ್ ಆವರಣದಿಂದ ತೆರವುಗೊಳಿಸುವಂತೆ ಅರ್ಜಿದಾರರಿಗೆ ಮೂರು ತಿಂಗಳ ಕಾಲಾವಕಾಶ ನೀಡಿದೆ.
ಪರ್ಯಾಯ ಭೂಮಿಗಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ನೀಡಲು ಅರ್ಜಿದಾರರಿಗೆ ಅವಕಾಶ ನೀಡಿದ ಸುಪ್ರೀಂ ಕೋರ್ಟ್, ಅರ್ಜಿದಾರರು ಮೂರು ತಿಂಗಳ ಗಡುವಿನೊಳಗೆ ಮಸೀದಿಯನ್ನು ತೆರವುಗೊಳಿಸಲು ವಿಫಲವಾದರೆ, ಸಂಬಂಧಪಟ್ಟ ಅಧಿಕಾರಿಗಳು ಮಸೀದಿಯನ್ನು ತೆರವುಗೊಳಿಸಬಹುದು ಎಂದು ಹೇಳಿದೆ.
ಮಸೀದಿಯ ಆಡಳಿತ ಸಮಿತಿಯ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಮಸೀದಿಯು 1950 ರ ದಶಕದಿಂದಲೂ ನೆಲೆ ನಿಂತಿದ್ದು, ಅದನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.
ಹೈಕೋರ್ಟ್ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಕೇಶ್ ದ್ವಿವೇದಿ, ಇದೊಂದು ಸಂಪೂರ್ಣ ವಂಚನೆಯ ಪ್ರಕರಣ ಎಂದು ವಾದಿಸಿದರು.ಮಸೀದಿಯು ಸರ್ಕಾರಿ ಲೀಸ್ ಭೂಮಿಯಲ್ಲಿದ್ದು, ಲೀಸ್ ನ ಒಡಂಬಡಿಕೆಗಳು 2002 ರಲ್ಲಿ ರದ್ದುಗೊಂಡಿದೆ ಎಂಬುದನ್ನು ಪೀಠವು ಗಮನಿಸಿದೆ