ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಅತ್ತೆಯ ಮೇಲೆ ತಲ್ವಾರ್‌ನಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಬನಶಂಕರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ವ್ಯಕ್ತಿಯನ್ನು ಆಸೀಫ್ ಎಂದು ಗುರುತಿಸಲಾಗಿದೆ. ಈತ ಪತ್ನಿ ಹೀನಾ ಕೌಸರ್ (25) ಅತ್ತೆ ಫರ್ವಿನ್ ತಾಜ್ ಮೇಲೆ ಜ. 14 ರಂದು ಹೀನ ಕೃತ್ಯ ಎಸಗಿದ್ದಾನೆ. 10 ವರ್ಷಗಳ ಹಿಂದೆ ತಾಯಿಯ ಅಣ್ಣನ ಮಗ ಆಸೀಫ್‌ನ ಜೊತೆ ಹೀನಾ ಕೌಸರ್ ಮದುವೆ ಮಾಡಲಾಗಿತ್ತು. ದಂಪತಿಗೆ ಒಂದು ಹೆಣ್ಣು, ಒಂದು ಗಂಡು ಮಗುವಿದೆ.
ಕಳೆದ ವರ್ಷ ಪರ ಸ್ತ್ರೀ ಸಹವಾಸ ಮಾಡಿದ ಪತಿ, ಪತ್ನಿಗೆ ಹಿಂಸೆ ಕೊಡಲು ಆರಂಭಿಸಿದ್ದ. ಕಾಲೇಜು ಸ್ನೇಹಿತರಿಗೆ ಪತ್ನಿ ಮಾಡಿದ್ದ ಮೆಸೇಜ್ ನೋಡಿ ಅಕ್ರಮ ಸಂಬಂಧ ಇದೆ ಎಂದು ನಿತ್ಯ ಕಿರುಕುಳ ನೀಡುತ್ತಿದ್ದ. ಕಾಟ ತಾಳದೆ 8 ತಿಂಗಳ ಹಿಂದೆ ಮಗಳ ಜೊತೆ ತವರು ಮನೆಗೆ ಬಂದಿದ್ದ ಪತ್ನಿ, ಜೀವನಕ್ಕಾಗಿ ಕೆಲಸಕ್ಕೆ ಸೇರಿದ್ದಳು. ಆದರೂ ಪತ್ನಿಯ ಶೀಲ ಶಂಕಿಸಿ ಅತ್ತೆ ಮನೆಗೆ ಬಂದು ಮೂರು ಬಾರಿ ಹಲ್ಲೆ ಯತ್ನ ನಡೆಸಿದ್ದ ಎಂದು ಆರೋಪಿಸಲಾಗಿದೆ.
ಜ.14 ರಂದು ಅತ್ತೆ ಇಲ್ಲದಿದ್ದಾಗ ಏಕಾಏಕಿ ಮನೆಗೆ ನುಗ್ಗಿ ತಲ್ವಾರ್ ನಲ್ಲಿ ಪತ್ನಿ ಮೇಲೆ ದಾಳಿ ನಡೆಸಿದ್ದಾನೆ. ಬಳಿಕ ಮನೆಗೆ ಬಂದ ಅತ್ತೆಯ ಮೇಲೂ ಸಹ ಆರೋಪಿ ದಾಳಿ ನಡೆಸಿ, ತಲ್ವಾರ್ ಬಿಟ್ಟು ಆರೋಪಿ ಪರಾರಿಯಾಗಿದ್ದ. ಗಾಯಗೊಂಡಿದ್ದ ಮಗಳು ಹಾಗೂ ತಾಯಿಯನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು.
ಇತ್ತ ತಲ್ವಾರ್‌ನಿಂದ ದಾಳಿ ನಡೆಸಿದ ಆರೋಪಿ ಆಸೀಫ್‌ನನ್ನು ಪೊಲೀಸರು ಬಂಧಿಸಿದ್ದಾರೆ.