ಹಾವೇರಿ : ಇಂದಿರಾ ಕ್ಯಾಂಟೀನ್ (Indira Canteen) ಯೋಜನೆ ಸಿದ್ದರಾಮಯ್ಯ ಕನಸಿನ ಯೋಜನೆ. ಬಡವರಿಗೆ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಆಹಾರ ಸಿಗಬೇಕು ಎಂಬ ಕಾರಣಕ್ಕೆ ಈ ಯೋಜನೆ ಜಾರಿ ಮಾಡಲಾಗಿದೆ. ಆದರೆ, ಸಿಎಂ ಕನಸಿನ ಇಂದಿರಾ ಕ್ಯಾಂಟೀನ್‌ನಲ್ಲೇ ಸ್ನಾನ ಭಾಗ್ಯವನ್ನೂ ಕರುಣಿಸಲಾಗಿದೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣ ಬಸ್ ನಿಲ್ದಾಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಸಿಬ್ಬಂದಿ ಸ್ನಾನ ಮಾಡಿದ್ದಾರೆ. ಸಿಬ್ಬಂದಿ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ನಾನ ಗೃಹ ಇಲ್ಲದ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಅಡುಗೆ ಕೊಠಡಿಯಲ್ಲೇ ಸ್ನಾನ ಮಾಡಿದ್ದಾರೆ. ಆ ವಿಡಿಯೋ ಸಖತ್ ವೈರಲ್ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಂದಿರಾ ಕ್ಯಾಂಟೀನ್ ನಲ್ಲೇ ಸ್ನಾನ!!#IndiraCanteen #Congress #cmsiddaramaiah #canteenstaff #bathing #shiggaon #Viralvideo #KannadaNews #navasamajanews pic.twitter.com/AzXitUDjgI
— navasamaja (@navasamajanews) November 5, 2025
ಒಂದು ಕಡೆ ಅಡುಗೆ ತಯಾರಿಯ ಕೆಲಸಗಳು ನಡೆಯುತ್ತಿದ್ದರೆ, ಇನ್ನೊಂದು ಕಡೆ ಸಿಬ್ಬಂದಿ ಸ್ನಾನ ಮಾಡುತ್ತಿರುವುದು ನೈರ್ಮಲ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಾಧ್ಯಮದವರು ಈ ಬಗ್ಗೆ ಪ್ರಶ್ನಿಸಿದಾಗ, ‘ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ’ ಎಂದು ಸಿಬ್ಬಂದಿ ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿರುವ ಪುರಸಭೆ ಅಧಿಕಾರಿಗಳು, ಅವಸರದಲ್ಲಿ ಕ್ಯಾಂಟೀನ್ ಉದ್ಘಾಟನೆಗೆ ಮುಂದಾಗಿರುವುದು ಇಂತಹ ಅವ್ಯವಸ್ಥೆಗೆ ಮುಖ್ಯ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಪರ್ಯಾಸವೆಂದರೆ, ಇನ್ನೂ ಅಧಿಕೃತವಾಗಿ ಉದ್ಘಾಟನೆಯನ್ನೇ ಕಾಣದ ಈ ಇಂದಿರಾ ಕ್ಯಾಂಟೀನ್‌ನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಅಡುಗೆ ಕೊಠಡಿಯ ಒಂದು ಮೂಲೆಯಲ್ಲಿ ಸಿಬ್ಬಂದಿ ಸ್ನಾನ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ.
ಇನ್ನೂ ಉದ್ಘಾಟನೆಯನ್ನೇ ಕಾಣದ ಕ್ಯಾಂಟೀನ್
ಈಗ ವಿವಾದಕ್ಕೆ ಕಾರಣವಾಗಿರೋ ಇಂದಿರಾ ಕ್ಯಾಂಟೀನ್, ಇನ್ನೂ ಉದ್ಘಾಟನೆಯನ್ನೇ ಕಂಡಿಲ್ಲ. ಆದರೆ ಶಿಗ್ಗಾವಿ ಪುರಸಭೆ ವ್ಯಾಪ್ತಿಯಲ್ಲಿರೋ ಇಂದಿರಾ ಕ್ಯಾಂಟೀನ್ ಅನ್ನು ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಉದ್ಘಾಟನೆಗೆ ಸಕಲ ಸಿದ್ಧತೆಗಳು ನಡೆದಿವೆ. ಅಷ್ಟರಲ್ಲೇ ಸಿಬ್ಬಂದಿ ಸ್ನಾನ ಮಾಡಿ, ಇಂದಿರಾ ಕ್ಯಾಂಟೀನ್ಗೆ ಪ್ರಚಾರ ಕೊಟ್ಟಿದ್ದಾರೆ.
ಕಡಿಮೆ ದರದಲ್ಲಿ ಊಟ ಮತ್ತು ಉಪಾಹಾರ
ಇಂದಿರಾ ಕ್ಯಾಂಟಿನ್ ಉದ್ಘಾಟನೆ ಆದರೆ ಸಾರ್ವಜನಿಕರು ಕಡಿಮೆ ಹಣದಲ್ಲಿಯೇ ಊಟ ಮತ್ತು ಉಪಾಹಾರ ಮಾಡುವ ಮೂಲಕ ಹೊಟ್ಟೆ ತುಂಬಿಸಿಕೊಳ್ಳಬಹುದಾಗಿದೆ. ಬೆಳಗ್ಗೆ 5 ರೂಪಾಯಿಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ₹ 10ಕ್ಕೆ ಊಟ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.
ಇಂದಿರಾ ಕ್ಯಾಂಟೀನ್ ಉದ್ದೇಶ
ಇಂದಿರಾ ಕ್ಯಾಂಟೀನ್ನಿಂದ ಸಾವಿರಾರು ಜನರಿಗೆ ಲಾಭ ಆಗುತ್ತದೆ. ಹತ್ತಾರು ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ, ಸರ್ಕಾರಿ ಕಾರ್ಯಾಲಯಕ್ಕೆ ಕೆಲಸಕ್ಕೆ ಬರುವ ಜನರಿಗೆ ಈ ಕ್ಯಾಂಟೀನ್ ಬಸ್ ನಿಲ್ದಾಣಕ್ಕೆ ಸಮೀಪವಿರುವ ಕಾರಣದಿಂದ ಕಡಿಮೆ ಹಣದಲ್ಲಿ ಸಾರ್ವಜನಿಕರ ಹೊಟ್ಟೆ ತುಂಬಿಸಲು ಅನುಕೂಲವಾಗಲಿದೆ.
ಇಂದಿರಾ ಕ್ಯಾಂಟೀನ್ ಮೆನು
ವಾರದ ಏಳು ದಿನವೂ ಬೆಳಗ್ಗೆ ಇಡ್ಲಿ ಹಾಗೂ ಪ್ರತಿ ದಿನವೂ ಒಂದೊಂದು ಮಾದರಿಯ ರೈಸ್ ಬಾತ್ ಕೊಡ್ತಾರೆ. ಅಲ್ಲದೇ ಚಟ್ನಿ, ಸಾಂಬರ್, ಮೊಸರು ಬಜ್ಜಿ ಹಾಗೂ ಖಾರಾ ಬೂಂದಿ ಇರುತ್ತೆ.
ವಾರದ ಇತರ ದಿನಗಳಲ್ಲಿ ಬೆಳಗಿನ ಉಪಾಹಾರಕ್ಕೆ ಇಡ್ಲಿ ಜೊತೆಗೆ ಪಲಾವ್, ಬಿಸಿಬೇಳೆ ಬಾತ್, ಖಾರಾಬಾತ್, ಪೊಂಗಲ್ ಕೊಡ್ತಾರೆ. ಅಲ್ಲದೇ ರಾತ್ರಿ ಹಾಗೂ ಮಧ್ಯಾಹ್ನ ಮುದ್ದೆ ಅಥವಾ ಚಪಾತಿ ಕೊಡುತ್ತೇವೆ ಅಂತ ಸರ್ಕಾರ ಹೇಳಿದೆ.
ಇದನ್ನೂ ಓದಿ : ಬುಡಕಟ್ಟು ಮಕ್ಕಳ ಶಾಲೆಯಲ್ಲಿ ಟೀಚರಮ್ಮನ ದರ್ಬಾರ್ – ಪಾದಕ್ಕೆ ಮಸಾಜ್ ಸೇವೆ!- VIDEO