Thursday, April 16, 2026
Homeಕ್ರೈಂROBBERY: ಹಣದ ಆಸೆಗೆ ಪ್ರಾಣ ಸ್ನೇಹಿತನಿಗೇ ದ್ರೋಹ - ನಕಲಿ ಪೊಲೀಸ್‌ನ ಕಳಿಸಿ ದರೋಡೆ ಮಾಡಿಸಿದ...

ROBBERY: ಹಣದ ಆಸೆಗೆ ಪ್ರಾಣ ಸ್ನೇಹಿತನಿಗೇ ದ್ರೋಹ – ನಕಲಿ ಪೊಲೀಸ್‌ನ ಕಳಿಸಿ ದರೋಡೆ ಮಾಡಿಸಿದ ಆಸಾಮಿ!

ಬೆಂಗಳೂರು: ಹಣದ ಆಸೆಗಾಗಿ ವ್ಯಕ್ತಿಯೊಬ್ಬ ಪ್ರಾಣ ಸ್ನೇಹಿತನಿಗೆ ದ್ರೋಹ ಬಗೆದಿರುವ ಘಟನೆ ನಡೆದಿದೆ. ನಕಲಿ ಪೊಲೀಸ್‌ನನ್ನು (Fake Police) ಕಳುಹಿಸಿ, ತನ್ನ ಸ್ನೇಹಿತನ ಹನವನ್ನೇ ಸಿನಿಮೀಯ ರೀತಿಯಲ್ಲಿ ದರೋಡೆ (Robbery) ಮಾಡಿಸಿರುವಂತಹ ಆಘಾತಕಾರಿ ಘಟನೆ ಬೆಂಗಳೂರಿನ (Bengaluru) ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್‌ನಲ್ಲಿ ನಡೆದಿದೆ.

ಹೊಂಬೇಗೌಡ ಎಂಬುವವರ ಮನೆಯಲ್ಲಿ ನಡೆದಿದ್ದ ಈ ದರೋಡೆ ಕೇಸ್‌ಗೆ ಈಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಹೊಂಬೇಗೌಡರ ಆಪ್ತ ಸ್ನೇಹಿತ 52 ವರ್ಷದ ಸ್ಕ್ಯಾಂಪ್ ವೆಂಡರ್ ಬೆಟ್ಟೇಗೌಡನೇ ಈ ದರೋಡೆಯ ಮಾಸ್ಟರ್‌ಮೈಂಡ್. ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಹೊಂಬೇಗೌಡ ಇತ್ತೀಚೆಗೆ ಸೈಟ್ ಮಾರಾಟ ಮಾಡಿದ್ದರು. ಈ ವ್ಯವಹಾರದ ಪೇಪರ್ ಕೆಲಸಗಳನ್ನು ಬೆಟ್ಟೇಗೌಡನೇ ಮಾಡಿಕೊಟ್ಟಿದ್ದ. ಸ್ನೇಹಿತನ ಬಳಿ ಸೈಟ್ ಮಾರಿದ ಹಣವಿದೆ ಎಂಬ ವಿಷಯ ಬೆಟ್ಟೇಗೌಡನಿಗೆ ತಿಳಿದಿತ್ತು. ಹಣದ ದುರಾಸೆಗೆ ಬಿದ್ದ ಆತ ಹೇಗಾದರೂ ಹಣ ಲಪಟಾಯಿಸಬೇಕೆಂದು ಹುನ್ನಾರ ರಚಿಸಿದ್ದಾನೆ.

ಗೆಳೆಯನ ಮನೆ ದರೋಡೆ ಮಾಡಲು ಬೆಟ್ಟೇಗೌಡ ಕ್ರಿಮಿನಲ್‌ ಒಬ್ಬನ ಸಹವಾಸ ಮಾಡಿದ್ದಾನೆ. ಜೈಲಿಂದ ಪೆರೋಲ್ ಮೇಲೆ ಹೊರಬಂದಿದ್ದ ನಾಗೇಂದ್ರ ಎಂಬಾತನನ್ನು ಸಂಪರ್ಕ ಮಾಡಿದ ಬೆಟ್ಟೇಗೌಡ, ಪೊಲೀಸ್‌ ವೇಷದಲ್ಲಿ ಹೊಂಬೇಗೌಡನ ಮನೆ ದರೋಡೆ ಮಾಡುವಂತೆ ಐಡಿಯಾ ಕೊಟ್ಟಿದ್ದಾನೆ. ಅಷ್ಟೇ ಅಲ್ಲದೇ ಸ್ನೇಹಿತನ ಮನೆಯ ಸಂಪೂರ್ಣ ಮಾಹಿತಿ, ಹಣ ಎಲ್ಲಿದೆ ಎಂಬ ವಿಚಾರವನ್ನು ಕೂಡಾ ಇಂಚಿಂಚಾಗಿ ತಿಳಿಸಿದ್ದಾನೆ.

ಈ ದರೋಡೆಯನ್ನು ಸಿನಿಮೀಯ ಶೈಲಿಯಲ್ಲಿ ನಡೆಸಲು ಮೊದಲೇ ಸ್ಕೆಚ್‌ ಹಾಕಿದ್ದ ಬೆಟ್ಟೇಗೌಡ, ಸಿನಿಮಾ ಶೂಟಿಂಗ್‌ ಎಂದು ಸುಳ್ಳು ಹೇಳಿ ಪೊಲೀಸ್‌ ಯೂನಿಫಾರ್ಮ್‌ ಅನ್ನು ಬಾಡಿಗೆಗೆ ಪಡೆದು ನಾಗೇಂದ್ರನಿಗೆ ಕೊಟ್ಟಿದ್ದಾನೆ. ಅದನ್ನು ಧರಿಸಿದ ನಾಗೇಂದ್ರ ಹಾಗೂ ಆತನ ತಂಡ ಹೊಂಬೇಗೌಡರ ಮನೆಗೆ ನುಗ್ಗಿ ಮನೆ ಮಂದಿಯನ್ನು ಬೆದರಿಸಿ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.

ಈ ಮೊದಲು ಪೊಲೀಸರು ಕಾರ್ಯಾಚರಣೆ ನಡೆಸಿ ನಕಲಿ ಪೊಲೀಸ್ ನಾಗೇಂದ್ರ, ಬಚ್ಚನ್ ಎಂಬುವವರನ್ನು ಬಂಧಿಸಿದ್ದರು. ತೀವ್ರ ವಿಚಾರಣೆ ನಡೆಸಿದಾಗ ಈ ದರೋಡೆಗೆ ಹೊಂಬೇಗೌಡನ ಸ್ನೇಹಿತ ಬೆಟ್ಟೇಗೌಡನೇ ಮಾಸ್ಟರ್‌ ಮೈಂಡ್‌ ಎನ್ನುವುದನ್ನು ಬಾಯಿ ಬಿಟ್ಟಿದ್ದಾರೆ. ಇದೀಗ ಪೊಲೀಸರು ಬೆಟ್ಟೇಗೌಡನನ್ನು ಕೂಡಾ ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧಿತರಿಂದ ಒಟ್ಟು 570 ಗ್ರಾಂ ಚಿನ್ನಾಭರಣ, 14 ಲಕ್ಷ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಹಾಸ್ಟೆಲ್‌ ಹತ್ಯೆ ಕೇಸ್‌ – ಗಾಂಜಾ ವ್ಯಸನಕ್ಕೆ ಬಿದ್ದಿದ್ದನೇ ಆರೋಪಿ ಬಾಲಕ?

ಹೆಚ್ಚಿನ ಸುದ್ದಿ

Change Language »
error: Content is protected !!