ಕೋಲ್ಕತ್ತಾ: 7 ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರ ಎಸಗಿದ 34 ವರ್ಷದ ವ್ಯಕ್ತಿಗೆ ಕೋಲ್ಕತ್ತಾದ ಪೋಕ್ಸೊ ನ್ಯಾಯಾಲಯವು ಮಂಗಳವಾರ ಮರಣದಂಡನೆ ವಿಧಿಸಿದೆ.
ಕಳೆದ ವರ್ಷ ನವೆಂಬರ್ 30 ರಂದು ಅಪರಾಧಿ ರಾಜೀಬ್ ಘೋಷ್ ಏಳು ತಿಂಗಳ ಮಗುವನ್ನು ಅಪಹರಿಸಿ, ಅದರ ಮೇಲೆ ಮೃಗೀಯ ಕೃತ್ಯ ಎಸಗಿ ಮಗುವಿನ ಹತ್ಯೆಗೆ ಯತ್ನಿಸಿದ್ದ. ಇದರಿಂದ ಮಗು ಜೀವನ್ಮರಣ ಹೋರಾಟ ನಡೆಸಿತ್ತು.
ಈ ಅಪರಾಧವು ಅಪರೂಪದಲ್ಲೇ ಅಪರೂಪ ಪ್ರಕರಣದ ಅಡಿಯಲ್ಲಿ ಬರುತ್ತದೆ ಎಂದು ವಕೀಲರು ವಾದಿಸಿ, ಅಪರಾಧಿಗೆ ಮರಣದಂಡನೆ ನೀಡುವಂತೆ ಮನವಿ ಮಾಡಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಅಂತಿಮ ಸುತ್ತಿನ ವಾದವನ್ನು ಆಲಿಸಿದ ನಂತರ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ. ಕೋರ್ಟ್ ಸಂತ್ರಸ್ತರಿಗೆ 10 ಲಕ್ಷ ರೂ. ಪರಿಹಾರವನ್ನೂ ನೀಡಿದೆ.
ಇದು ಕಳೆದ ಆರು ತಿಂಗಳಲ್ಲಿ ಪಶ್ಚಿಮ ಬಂಗಾಳದ ನ್ಯಾಯಾಲಯಗಳು ನೀಡಿದ ಏಳನೇ ಮರಣದಂಡನೆ ಮತ್ತು ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಪೋಕ್ಸೊ ಕಾಯ್ದೆಯಡಿ ನೀಡಲಾದ ಆರನೇ ಮರಣದಂಡನೆಯಾಗಿದೆ.