ಕೋಲ್ಕತ್ತಾ : ಪಶ್ಚಿಮ ಬಂಗಾಳದ (West Bengal) ವಿಧಾನಸಭೆ ಚುನಾವಣೆಯಲ್ಲಿ ಅನುಭವಿಸಿದ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಎದ್ದಿರುವ ಬಂಡಾಯದ ಕುರಿತು ಮಮತಾ ಬ್ಯಾನರ್ಜಿ (Mamata Banerjee) ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಪಕ್ಷದಲ್ಲಿ ಸೃಷ್ಟಿಯಾಗಿರುವ ಈ ಭಿನ್ನಮತ ಮತ್ತು ಬಿಕ್ಕಟ್ಟಿಗೆ ನೇರವಾಗಿ ಬಿಜೆಪಿಯೇ ಕಾರಣ ಎಂದು ಹೇಳಿರೋ ಅವರು, ಧೈರ್ಯವಿದ್ದರೆ ನೇರವಾಗಿ ಹೋಗಿ ಬಿಜೆಪಿಯನ್ನೇ ಸೇರಿಕೊಳ್ಳಿ, ಎಂದು ಬಂಡಾಯ ನಾಯಕರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಬಿಡುಗಡೆ ಮಾಡಿರುವ 26 ನಿಮಿಷಗಳ ವಿಡಿಯೋದಲ್ಲಿ ಸಿಟ್ಟು ಹೊರ ಹಾಕಿದ್ದಾರೆ.
ಇವಿಎಂ ತಿರುಚಿ ಬಿಜೆಪಿ ಅಧಿಕಾರಕ್ಕೆ ಬಂದಿದೆ
ಪಕ್ಷದ ಬಂಡಾಯಗಾರರ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ, ನಾನು ಇನ್ನೂ ಬದುಕಿದ್ದೇನೆ, ನನ್ನನ್ನು ಸತ್ತಿದ್ದೇನೆ ಎಂದುಕೊಂಡಿದ್ದೀರಾ? ಟಿಎಂಸಿ ನಾಯಕರ ಬೆನ್ನಿಗೆ ನಿಂತು ಪಕ್ಷವನ್ನು ಒಡೆಯಲು ಬಿಜೆಪಿ ಸಂಚು ರೂಪಿಸುತ್ತಿದೆ. ನಿಮಗೆ ತಾಕತ್ತಿದ್ದರೆ ನೇರವಾಗಿ ಆಡಳಿತ ಪಕ್ಷವನ್ನು (ಬಿಜೆಪಿ) ಸೇರಿ ನನ್ನ ವಿರುದ್ಧ ಸೆಣಸಾಡಿ. ಆದರೆ, ನಿಮಗೆ ಮತ ನೀಡಿದ ಜನರಿಗೆ ಮತ್ತು ಪಕ್ಷಕ್ಕೆ ದ್ರೋಹ ಬಗೆಯಬೇಡಿ, ಎಂದು ಎಚ್ಚರಿಸಿದರು.ಇದೇ ವೇಳೆ ಹಿರಿಯ ನಾಯಕ ಸುಬ್ರತಾ ಬಕ್ಷಿ ಅವರು ಅನಾರೋಗ್ಯದಿಂದ ಚೇತರಿಸಿಕೊಳ್ಳುವವರೆಗೂ ತಾವೇ ಟಿಎಂಸಿಯ ರಾಜ್ಯ ಘಟಕದ ಅಧ್ಯಕ್ಷರಾಗಿ ಮುಂದುವರಿಯುವುದಾಗಿ ದೀದಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ : ಟಿಎಂಸಿಗೆ ಮತ್ತೊಂದು ಮರ್ಮಾಘಾತ – ರಾಜ್ಯಾಧ್ಯಕ್ಷ ಸ್ಥಾನ ತೊರೆದ ಚಂದ್ರಿಮಾ ಭಟ್ಟಾಚಾರ್ಯ
ಇತ್ತೀಚೆಗೆ ಮುಗಿದ 2026 ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಫಲಿತಾಂಶದ ಕುರಿತು ಮಾತನಾಡಿದ ಅವರು, ಬಿಜೆಪಿ ದೇಶದಲ್ಲಿ ಮತಗಳನ್ನು ಲೂಟಿ ಮಾಡಿ, ಇವಿಎಂ (EVM) ಯಂತ್ರಗಳನ್ನು ತಿರುಚಿ ಹಾಗೂ ಮತ ಎಣಿಕೆ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮ ಎಸಗಿ ಅಧಿಕಾರಕ್ಕೆ ಬಂದಿದೆ ಎಂಬುದು ನಮಗೆಲ್ಲರಿಗೂ ಗೊತ್ತು. ಪ್ರಸ್ತುತ ಬಂಗಾಳದಲ್ಲಿ ಎಂತಹ ಭಯೋತ್ಪಾದನೆ ಶುರುವಾಗಿದೆಯೆಂದರೆ, ನಮ್ಮನ್ನು ಬೆಂಬಲಿಸುವ ಸಹಸ್ರಾರು ಕಾರ್ಯಕರ್ತರನ್ನು ಯಾವುದೇ ಕೋರ್ಟ್ ಆರ್ಡರ್ ಇಲ್ಲದಿದ್ದರೂ ಹಗಲು ಹೊತ್ತಿನಲ್ಲೇ ಟಾರ್ಗೆಟ್ ಮಾಡಿ ಹಿಂಸಿಸಲಾಗುತ್ತಿದೆ, ಎಂದು ಆರೋಪ ಮಾಡಿದರು.
ಟಿಎಂಸಿಯಲ್ಲಿ ಎದ್ದಿರುವ ಬಂಡಾಯದ ಹಿನ್ನೆಲೆ ಏನು?
ಪಶ್ಚಿಮ ಬಂಗಾಳದಲ್ಲಿ ಸತತ 15 ವರ್ಷಗಳ ಕಾಲ ಆಡಳಿತ ನಡೆಸಿದ್ದ ಮಮತಾ ಬ್ಯಾನರ್ಜಿ ಮತ್ತು ಅವರ ಟಿಎಂಸಿ ಪಕ್ಷವು 2026ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮುಂದೆ ಧೂಳೀಪಟವಾಗಿತ್ತು. ಒಟ್ಟು 294 ಕ್ಷೇತ್ರಗಳ ಪೈಕಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರೆ, ಟಿಎಂಸಿ ಕೇವಲ 80 ಸ್ಥಾನಗಳಿಗೆ ಕುಸಿದಿತ್ತು. ಸೋಲಿನ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅವರ ಆಪ್ತ ವಲಯದಲ್ಲೇ ಭಾರಿ ಬಿರುಕು ಮೂಡಿದೆ.
ಟಿಎಂಸಿ ನಾಯಕತ್ವದ ವಿರುದ್ಧ ಬಂಡಾಯ ಎದ್ದಿರುವ ರಿತಬ್ರತಾ ಬ್ಯಾನರ್ಜಿ ಅವರು ಬರೋಬ್ಬರಿ 64 ಶಾಸಕರ ಬೆಂಬಲದೊಂದಿಗೆ ಪಶ್ಚಿಮ ಬಂಗಾಳ ವಿಧಾನಸಭೆಯ ಅಧಿಕೃತ ವಿರೋಧ ಪಕ್ಷದ ನಾಯಕ (LoP) ಆಗಿ ಆಯ್ಕೆಯಾಗಿದ್ದಾರೆ. ಮೂರನೇ ಎರಡರಷ್ಟು ಶಾಸಕರ ಬೆಂಬಲ ಹೊಂದಿರುವ ತಮ್ಮ ಬಣವೇ ಅಸಲಿ ತೃಣಮೂಲ ಕಾಂಗ್ರೆಸ್ ಎಂದು ಅವರು ಪ್ರತಿಪಾದಿಸುತ್ತಿದ್ದಾರೆ. ಮಮತಾ ಅವರಿಗೆ ಮತ್ತೊಂದು ದೊಡ್ಡ ಆಘಾತ ಎಂಬಂತೆ, ಪ್ರಮುಖ ಲೋಕಸಭಾ ಸಂಸದರಾದ ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದಲ್ಲಿ ಟಿಎಂಸಿಯ 20 ಲೋಕಸಭಾ ಸದಸ್ಯರು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಒಕ್ಕೂಟವನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಇದು ಲೋಕಸಭೆಯಲ್ಲೂ ಟಿಎಂಸಿ ಪಕ್ಷವನ್ನು ಇಬ್ಬಾಗ ಮಾಡಿದೆ.
ಒಂದೆಡೆ ಕೈತಪ್ಪಿದ ಅಧಿಕಾರ, ಮತ್ತೊಂದೆಡೆ ಶಾಸಕರು ಮತ್ತು ಸಂಸದರ ಸಾಮೂಹಿಕ ಬಂಡಾಯದಿಂದ ಕಂಗೆಟ್ಟಿರುವ ಮಮತಾ ಬ್ಯಾನರ್ಜಿ ಅವರು, ಪ್ರಸ್ತುತ ಉದ್ಭವಿಸಿರುವ ಈ ರಾಜಕೀಯ ಬಿಕ್ಕಟ್ಟಿನಿಂದ ತಮ್ಮ ಪಕ್ಷವನ್ನು ಹೇಗೆ ಉಳಿಸಿಕೊಳ್ಳುತ್ತಾರೆ ಮತ್ತು ಹೇಗೆ ಪುನಶ್ಚೇತನಗೊಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.