ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ರಾಜಕಾರಣದಲ್ಲಿ ಭಾರಿ ಬೆಳವಣಿಗೆಯೊಂದು ನಡೆದಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷವು ಇಬ್ಬಾಗವಾಗುವ ಹಂತಕ್ಕೆ ಬಂದು ತಲುಪಿದೆ.
ಪಕ್ಷದಿಂದ ಉಚ್ಛಾಟನೆಗೊಂಡಿರುವ ಶಾಸಕ ರಿತಬ್ರತಾ ಬ್ಯಾನರ್ಜಿ ಅವರ ಹಿಂದೆ ಟಿಎಂಸಿಯ ಬಹುತೇಕ ಶಾಸಕರು ಕೈಜೋಡಿಸಿರುವುದು ಈಗ ದೀದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್‌ಸಿಪಿ ಪಕ್ಷಗಳು ಒಡೆದ ಮಾದರಿಯಲ್ಲೇ ಈಗ ಬಂಗಾಳದಲ್ಲೂ ಟಿಎಂಸಿ ಸೀಳುವ ಮುನ್ಸೂಚನೆಗಳು ದಟ್ಟವಾಗಿವೆ.
ಪಕ್ಷದ ಒಟ್ಟು 80 ಶಾಸಕರ ಪೈಕಿ ಸುಮಾರು 60 ಶಾಸಕರು ಬಂಡಾಯವೆದ್ದಿದ್ದು, ರಿತಬ್ರತಾ ಬ್ಯಾನರ್ಜಿ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲು ಸಹಿ ಹಾಕಿದ್ದಾರೆ. ತಾವುಗಳೇ ಅಸಲಿ ಟಿಎಂಸಿ ಎಂದು ಹಕ್ಕು ಮಂಡಿಸಲು ಈ ಬಂಡಾಯ ಶಾಸಕರ ಗುಂಪು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಈ ಕುರಿತ ಪತ್ರವನ್ನು ವಿಧಾನಸಭೆಯ ಸಭಾಪತಿಗಳಿಗೆ ಸಲ್ಲಿಸಲು ಮುಂದಾಗಿದೆ. ಇತ್ತೀಚೆಗೆ ಮಮತಾ ಬ್ಯಾನರ್ಜಿ ಅವರು ಕರೆದಿದ್ದ ಶಾಸಕರ ಸಭೆಗೆ ಕೇವಲ 20 ಶಾಸಕರು ಮಾತ್ರ ಹಾಜರಾಗಿದ್ದು ಪಕ್ಷದೊಳಗಿನ ಭಿನ್ನಮತವನ್ನು ಬಹಿರಂಗಪಡಿಸಿತ್ತು.
ಪಕ್ಷದೊಳಗಿನ ಈ ಬೆಳವಣಿಗೆಗಳ ಬೆನ್ನಲ್ಲೇ ಕೋಲ್ಕತ್ತಾದಲ್ಲಿ ಧರಣಿ ನಡೆಸಿರುವ ಮಮತಾ ಬ್ಯಾನರ್ಜಿ, ಬಿಜೆಪಿ ತನ್ನ ಪಕ್ಷವನ್ನು ಮುಗಿಸಲು ದೆಹಲಿಯಿಂದ ಸಂಚು ರೂಪಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಬಂಡಾಯ ಶಾಸಕರು ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ನಾಯಕತ್ವದ ಶೈಲಿಯ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಪಕ್ಷವನ್ನು ಕಾರ್ಪೊರೇಟ್ ಸಂಸ್ಥೆಯಂತೆ ನಡೆಸಲಾಗುತ್ತಿದೆ ಮತ್ತು ನಾಯಕರು ತಳಮಟ್ಟದ ಕಾರ್ಯಕರ್ತರ ಸಂಪರ್ಕ ಕಳೆದುಕೊಂಡಿದ್ದಾರೆ ಎಂದು ಬಂಡಾಯ ಶಾಸಕರು ಆಕ್ರೋಶ ಹೊರಹಾಕಿದ್ದಾರೆ. ಸದ್ಯಕ್ಕೆ ಬಂಗಾಳದ ರಾಜಕೀಯ ಹಗ್ಗಜಗ್ಗಾಟ ತುತ್ತತುದಿಗೆ ತಲುಪಿದ್ದು, ಮಮತಾ ಬ್ಯಾನರ್ಜಿ ತಮ್ಮ ರಾಜಕೀಯ ಭದ್ರಕೋಟೆಯನ್ನು ಹೇಗೆ ಉಳಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ : ಸಚಿವಾಕಾಂಕ್ಷಿಗಳಿಗೆ ಡವಡವ, ಡಿಸಿಎಂ ಸ್ಥಾನ ಒಬ್ಬರಿಗೆ ಮಾತ್ರ – ಏನಿದೆ ಡಿಕೆ ಪಟ್ಟಿಯಲ್ಲಿ?