ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಅಧ್ಯಕ್ಷ ಮಹೇಶ ಜೋಶಿಯವರು ದಲಿತ ಮಹಿಳೆಗೆ ವ್ಯವಸ್ಥಾಪಕ ಹುದ್ದೆ ನೀಡದೆ ವಂಚನೆ ಮಾಡಿರುವ ಆರೋಪ ಕೇಳಿ ಬರುತ್ತಿದೆ.
ಮಾಹಿತಿ ಹಕ್ಕು ತಜ್ಞರಾದ ಜೆ.ಎಂ.ರಾಜಶೇಖರ ಅವರು ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮಹೇಶ ಜೋಶಿ ಅವರೇ ನೇರ ಹೊಣೆ ಎಂದು ಹೇಳಲಾಗುತ್ತಿದೆ. ಪ್ರಕರಣವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೆಟ್ಟಿಲೇರಿದ್ದು, ಕಸಾಪ ಕಾರ್ಯದರ್ಶಿಗೆ ಇಲಾಖೆಯ ನಿರ್ದೇಶಕರು ಪತ್ರ ಬರೆದಿದ್ದಾರೆ.
ಏನಿದು ಆರೋಪ?
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸೇವೆಯಲ್ಲಿರುವ ಕೆ.ನಾಗರತ್ನಮ್ಮನವರು ಹಾಲಿ ಅಧೀಕ್ಷಕ ಹುದ್ದೆಯಲ್ಲಿದ್ದಾರೆ. ಖಾಲಿ ಇರುವ ವ್ಯವಸ್ಥಾಪಕ ಹುದ್ದೆಗೆ ಅರ್ಹರಾಗಿರುತ್ತಾರೆ. ಇವರು ಇರಬೇಕಾದ ಹುದ್ದೆಯಲ್ಲಿ ಇವರಿಗಿಂತ ಕಿರಿಯ ಹುದ್ದೆಯ ಪ್ರಥಮ ದರ್ಜೆ ಸಹಾಯಕ ಪಾರ್ಶ್ವನಾಥ ಅವರನ್ನು ಪ್ರಭಾರದಲ್ಲಿ ಇರಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಮಹೇಶ ಜೋಶಿಯವರು ವ್ಯವಸ್ಥಾಪಕ ಹುದ್ದೆಯನ್ನು ಕೆ.ನಾಗರತ್ನಮ್ಮ ಅವರಿಗೆ ನೀಡದೆ ವಂಚನೆ ಮಾಡಿದ್ದಾರೆ. ಮಹಿಳಾ ನೌಕರರಾದ ನಾಗರತ್ನಮ್ಮನವರಿಗೆ ರಕ್ಷಣೆ ನೀಡದೆ ನಿರ್ಲಕ್ಷ್ಯ ಮಾಡಲಾಗಿದೆ. ದಲಿತರ ರಕ್ಷಣೆಗಾಗಿ ಇರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಗಮನಕ್ಕೂ ಈ ವಿಷಯವನ್ನು ತರಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸಾಹಿತ್ಯ ಪರಿಷತ್‌ನಲ್ಲಿ ಈ ದಲಿತ ಮಹಿಳೆ ಮಾನಸಿಕ ಅಪಮಾನಕ್ಕೆ ಗುರಿಯಾಗಿದ್ದಾರೆ. ಇದರ ಮೂಲಕ ದಲಿತ ಮಹಿಳೆಗೆ ವಂಚನೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಮಾಹಿತಿ ಹಕ್ಕು ತಜ್ಞರಾದ ಜೆ.ಎಂ.ರಾಜಶೇಖರ ಅವರು, “ದಲಿತ ಮಹಿಳೆಗೆ ವಂಚನೆ ಸಂಬಂಧ ಮಹೇಶ ಜೋಷಿ ವಿರುದ್ಧ ತನಿಖೆಗೆ ದೂರು. ದಿನಕ್ಕೊಂದೊಂದು ರಾದ್ಧಾಂತ ಮೈಮೇಲೆಳೆದುಕೊಂಡು ಕಸಾಪ ಮಾನ, ಘನತೆ ಹರಾಜು ಹಾಕುತ್ತಿರುವ ಹೆಸರಾಂತ ನಾಡಿನ ಸಾಹಿತಿ! ಏನ್ ಗ್ರಹಚಾರನಪ ಛೇ ಛೇ ಛೇ!?” ಎಂದು ಟೀಕಿಸಿದ್ದಾರೆ.