ಮಹಾರಾಷ್ಟ್ರ ಸರ್ಕಾರ ಬೆಳಗಾವಿಯ ಕೆಲ ಹಳ್ಳಿಗಳಲ್ಲಿ ವಿವಿಧ ಯೋಜನೆಗಳಿಗೆ ಹಣ ಮಂಜೂರು ಮಾಡಿದೆ. ಆರೋಗ್ಯ ಕ್ಷೇತ್ರ ಹಾಗೂ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗಳಿಗೆ ೫೪ ಕೋಟಿ ರುಪಾಯಿ ಮಂಜೂರು ಮಾಡಿ ಕರ್ನಾಟಕವನ್ನು ಕೆಣಕಿದೆ. ನೆರೆ ರಾಜ್ಯದ ಈ ನಡೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.
ನಮ್ಮ ನಾಡಿನ ಹಳ್ಳಿಗಳನ್ನು ಕಾಪಾಡಿಕೊಳ್ಳೋದು, ಅಭಿವೃದ್ಧಿ ಮಾಡೋದು ನಮಗೆ ಬಿಟ್ಟ ವಿಚಾರ. ಮಹಾರಾಷ್ಟ್ರದ ಈ ನಡವಳಿಕೆ ಸಹಿಸಲು ಸಾಧ್ಯವಿಲ್ಲ. ಇದು ಕರ್ನಾಟಕ್ಕೆ ಆಗುತ್ತಿರುವ ಅವಮಾನ.
ಇದು ಕರ್ನಾಟಕದ ಬೆಳಗಾವಿಯನ್ನು ವಶಪಡಿಸಿಕೊಳ್ಳಲು ಮಹಾರಾಷ್ಟ್ರ ಮಾಡುತ್ತಿರುವ ಹುನ್ನಾರ. ಬೆಳಗಾವಿ ನಮ್ಮ ಭೂಮಿ, ಪ್ರಾಣ ತ್ಯಾಗ ಮಾಡಿಯಾದರೂ ಅದನ್ನು ಉಳಿಸಿಕೊಳ್ಳುತ್ತೇವೆ ಎಂದ್ರು
ಕರ್ನಾಟಕ ರಾಜ್ಯದ ಜನ ಸ್ವಾಭಿಮಾನಿಗಳು. ಆದ್ರೆ ಈಗ ಕನ್ನಡಿಗರ ಸ್ವಾಭಿಮಾನಕ್ಕೇ ಧಕ್ಕೆಯಾಘಿದೆ. ಕರ್ನಾಟಕ ಮುಖ್ಯಮಂತ್ರಿಗಳಿಗೆ ಈ ವಿಚಾರ ತಿಳಿದಿಲ್ಲವೇ? ಮುಖ್ಯಮಂತ್ರಿಗಳೇ ಕರುನಾಡಿನ ಜನರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ ಎಂದು ಕಿಡಿ ಕಾರಿದ ಶಿವಕುಮಾರ್, ಬಸವರಾಜ್ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ರು.
ನಾಡಿನ ನೆಲ ರಕ್ಷಣೆ ಮಾಡಿಕೊಳ್ಳೋದು ನಮ್ಮೆಲ್ಲರ ಹೊಣೆ, ಹೀಗಾಗಿ ಎಲ್ಲಾ ಕನ್ನಡ ಪರ ಸಂಘಟನೆಗಳು, ಸ್ವಾಭಿಮಾನಿ ಕನ್ನಡಿಗರು, ಕಲಾವಿದರು, ನಾಗರೀಕರು ಮಹಾರಾಷ್ಟ್ರದ ವಿರುದ್ಧದ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಇದೇ ವೇಳೆ ಮನವಿ ಮಾಡಿದ್ರು.