Wednesday, August 19, 2026
Homeಕ್ರೈಂTRAGEDY: ಪಂಢರಪುರದಲ್ಲಿ ಭೀಕರ ದುರಂತ, ಭಕ್ತರಿದ್ದ ವಾಹನ ಬಾವಿಗೆ ಬಿದ್ದು 14 ಯಾತ್ರಿಗಳ ಸಾ*ವು!

TRAGEDY: ಪಂಢರಪುರದಲ್ಲಿ ಭೀಕರ ದುರಂತ, ಭಕ್ತರಿದ್ದ ವಾಹನ ಬಾವಿಗೆ ಬಿದ್ದು 14 ಯಾತ್ರಿಗಳ ಸಾ*ವು!

ಪಂಢರಪುರ : ಮಹಾರಾಷ್ಟ್ರದ(Maharashtra) ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಪಂಢರಪುರದಲ್ಲಿ(Pandharpur) ಭಾನುವಾರ ಭೀಕರ ರಸ್ತೆ ಅಪಘಾತ(Road Mishap) ಸಂಭವಿಸಿದೆ. ವಿಠ್ಠಲನ(Vittala) ದರ್ಶನ ಮುಗಿಸಿ ಭಕ್ತರನ್ನು ಹೊತ್ತು ಸಾಗುತ್ತಿದ್ದ ಪಿಕಪ್(Pickup) ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಆಳವಾದ ಬಾವಿಗೆ ಉರುಳಿ ಬಿದ್ದ ಪರಿಣಾಮ, ಕನಿಷ್ಠ 14 ಭಕ್ತರು ದಾರುಣವಾಗಿ ಸಾವನ್ನಪ್ಪಿದ್ದಾರೆ(Tragedy). ಘಟನೆಯಲ್ಲಿ ಹಲವರು ತೀವ್ರವಾಗಿ ಗಾಯಗೊಂಡಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಪಿಕಪ್ ವಾಹನ
ಪ್ರಾಥಮಿಕ ಮಾಹಿತಿ ಪ್ರಕಾರ, ಪಂಢರಪುರ ವಿಠ್ಠಲನ ದರ್ಶನ ಪಡೆದು ಹಿಂದಿರುಗುತ್ತಿದ್ದ ಯಾತ್ರಿಕರ ಗುಂಪು ಈ ಪಿಕಪ್ ವಾಹನದಲ್ಲಿ ಪ್ರಯಾಣಿಸುತ್ತಿತ್ತು. ಚಲಿಸುತ್ತಿದ್ದ ವೇಳೆ ಚಾಲಕನಿಗೆ ಇದ್ದಕ್ಕಿದ್ದಂತೆ ವಾಹನದ ಮೇಲಿನ ನಿಯಂತ್ರಣ ತಪ್ಪಿದೆ. ವೇಗವಾಗಿದ್ದ ವಾಹನ ರಸ್ತೆಯಿಂದ ಪಕ್ಕಕ್ಕೆ ಸರಿದು, ನೇರವಾಗಿ ದೊಡ್ಡದಾದ ಬಾವಿಗೆ ಬಿದ್ದಿದೆ. ವಾಹನವು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದ್ದರಿಂದ, ಅದರ ಒಳಗಿದ್ದ ಪ್ರಯಾಣಿಕರು ಹೊರಬರಲಾರದೆ ನೀರಿನಲ್ಲೇ ಸಿಲುಕಿಕೊಂಡರು ಎನ್ನಲಾಗಿದೆ.

ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ
ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ನಿವಾಸಿಗಳು, ವಿಪತ್ತು ನಿರ್ವಹಣಾ ತಂಡಗಳು ಮತ್ತು ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದರು. ಸ್ಥಳೀಯರ ನೆರವಿನೊಂದಿಗೆ ಪೊಲೀಸರು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಬಾವಿಯ ನೀರಿನಿಂದ ಇದುವರೆಗೆ ಕನಿಷ್ಠ 14 ಜನರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ನೀರಿನಲ್ಲಿ ಮುಳುಗುತ್ತಿದ್ದ ಕೆಲವು ಪ್ರಯಾಣಿಕರನ್ನು ರಕ್ಷಣಾ ಸಿಬ್ಬಂದಿ ಸಕಾಲದಲ್ಲಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಗಾಯಗೊಂಡಿರುವ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಬಾವಿಯಲ್ಲಿ ಇನ್ನೂ ಯಾರಾದರೂ ಸಿಲುಕಿದ್ದಾರೆಯೇ ಎಂದು ಪತ್ತೆ ಹಚ್ಚಲು ನೀರಿನಿಂದ ವಾಹನವನ್ನು ಮೇಲೆತ್ತುವ ಪ್ರಕ್ರಿಯೆ ನಡೆಯುತ್ತಿದೆ.

ಮಹಾರಾಷ್ಟ್ರದ ಅತ್ಯಂತ ಪ್ರಮುಖ ಮತ್ತು ಪವಿತ್ರ ಯಾತ್ರಾ ಕೇಂದ್ರಗಳಲ್ಲಿ ಒಂದಾದ ಪಂಢರಪುರಕ್ಕೆ ವರ್ಷಪೂರ್ತಿ, ಅದರಲ್ಲೂ ವಿಶೇಷವಾಗಿ ಧಾರ್ಮಿಕ ಉತ್ಸವಗಳ ದಿನಗಳಲ್ಲಿ ದೇಶದ ವಿವಿಧ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ದೇವರ ದರ್ಶನ ಮುಗಿಸಿ ಮನೆಗೆ ಮರಳುವ ಮುನ್ನವೇ ಭಕ್ತರು ಸಾವಿನ ಮನೆ ಸೇರಿದ ಈ ಭೀಕರ ದುರಂತ ಇಡೀ ಪಂಢರಪುರ ನಗರವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.

ಇದನ್ನೂ ಓದಿ: ಬೆನ್ಜ್ ಕಾರು ಅಪಘಾ*ತ – ನಾಪತ್ತೆಯಾಗಿದ್ದ ಚಾಲಕನ ಶವ ಕಾಲುವೆಯಲ್ಲೇ ಪತ್ತೆ!

ಹೆಚ್ಚಿನ ಸುದ್ದಿ

Change Language »
error: Content is protected !!