ಮಹಾರಾಷ್ಟ್ರ : ಮುಂಬೈನಲ್ಲಿ (Mumbai) ಸೈಬರ್ ಅಪರಾಧಿಗಳು (Cyber crime) ‘ಡಿಜಿಟಲ್ ಅರೆಸ್ಟ್’ (Digital arrest) ತಂತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದು ಮಹಿಳೆಯೊಬ್ಬರಿಂದ ಭಾರಿ ಪ್ರಮಾಣದ ಹಣವನ್ನು ದೋಚಿದ್ದಾರೆ. ಸಾಮಾನ್ಯವಾಗಿ ಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಳ್ಳುವ ವಂಚಕರು, ಇಲ್ಲಿ ನೇರವಾಗಿ ಸಂತ್ರಸ್ತೆಯ ಮನೆಬಾಗಿಲಿಗೇ ಬಂದು ನಗದು ಪಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಅಪರಿಚಿತ ವ್ಯಕ್ತಿಗಳು ಕಾನೂನು ಸಂಸ್ಥೆಯ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ಮಹಿಳೆಯನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದಾರೆ.
ಇದನ್ನೂ ಓದಿ : ಪಾಪ ಎಂದು ಅಪರಿಚಿತರಿಗೆ ಮೊಬೈಲ್ ಕೊಡ್ತೀರಾ? ದುಡ್ಡು ಗುಳುಂ ಆಗುತ್ತೆ ಹುಷಾರ್!
ಹೀಗೆ ಕಾನೂನು ಕ್ರಮದ ಭಯ ಹುಟ್ಟಿಸಿ ಮಹಿಳೆಯನ್ನು ಹಲವು ಗಂಟೆಗಳ ಕಾಲ ಮನೆಯಲ್ಲೇ ಬಂಧಿಯಾಗಿರಿಸಿದ ವಂಚಕರು, ಮೊಬೈಲ್ ಮೂಲಕವೇ ಅವರ ಮೇಲೆ ನಿಗಾ ಇಟ್ಟಿದ್ದರು. ಈ ಹೊಸ ಮಾದರಿಯ ವಂಚನೆಯಲ್ಲಿ ಸೈಬರ್ ಕಳ್ಳರು ಯಾವುದೇ ಬ್ಯಾಂಕ್ ವ್ಯವಹಾರದ ಕುರುಹು ಸಿಗದಂತೆ ಭೌತಿಕವಾಗಿ ನಗದನ್ನು ಸಂಗ್ರಹಿಸುವ ತಂತ್ರ ಅನುಸರಿಸುತ್ತಿದ್ದಾರೆ.
ಈ ವಂಚಕರು ಮೊದಲಿಗೆ ಮಹಿಳೆಗೆ ವಿಡಿಯೋ ಕಾಲ್ ಮಾಡಿ ಅವರು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆಂದು ನಂಬಿಸಿದ್ದರು. ಆ ನಂತರ ತನಿಖೆಯ ನೆಪದಲ್ಲಿ ಅವರ ಮನೆಗೆ ವ್ಯಕ್ತಿಯೊಬ್ಬನನ್ನು ಕಳುಹಿಸಿ ಬರೋಬ್ಬರಿ 60 ಲಕ್ಷ ರೂಪಾಯಿ ನಗದನ್ನು ಪಡೆದುಕೊಂಡು ಪರಾರಿಯಾಗಿದ್ದಾರೆ. ಈ ಘಟನೆಯು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ನಡೆಯುತ್ತಿರುವ ಸುಲಿಗೆಯ ಗಂಭೀರತೆಯನ್ನು ತೋರಿಸುತ್ತಿದ್ದು, ಸಾರ್ವಜನಿಕರು ಇಂತಹ ಬೆದರಿಕೆ ಕರೆಗಳಿಗೆ ಮಣಿಯಬಾರದೆಂದು ಪೊಲೀಸರು ಎಚ್ಚರಿಸಿದ್ದಾರೆ.