ಕೆಲವು ದಿನಗಳಿಂದ ತಣ್ಣಗಾಗಿದ್ದ ಬೆಳಗಾವಿ ಗಡಿ ವಿವಾದ ಮತ್ತೆ ತೀವ್ರಗೊಳ್ಳುವ ಲಕ್ಷಣಗಳು ಕಾಣಿಸಲಾರಂಭಿಸಿವೆ. ಮಹಾರಾಷ್ಟ್ರ ಕರ್ನಾಟಕಕ್ಕೆ ಸೇರಿದ ಗ್ರಾಮಗಳಲ್ಲಿ ತನ್ನ ಸರ್ಕಾರದ ಯೋಜನೆಯನ್ನ ಹಮ್ಮಿಕೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ ಗಡಿ ಪ್ರದೇಶದ ಗ್ರಾಮಗಳಲ್ಲಿ ಮರಾಠಿ ಮಾತನಾಡುವ ಜನರಿಗಾಗಿ ಹಮ್ಮಿಕೊಂಡಿರುವ ಆರೋಗ್ಯ ಯೋಜನೆಯನ್ನು ಮಹಾರಾಷ್ಟ್ರ ಸರ್ಕಾರ 865 ಗ್ರಾಮಗಳಿಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಬೆಳಗಾವಿ, ಕಾರವಾರ, ಕಲಬುರ್ಗಿ ಮತ್ತು ಬೀದರ್ ಗಡಿ ವ್ಯಾಪ್ತಿಯ 865 ಗ್ರಾಮಗಳನ್ನು ಆರೋಗ್ಯ ಯೋಜನೆಯಡಿ ಸೇರಿಸಲಾಗಿದ್ದು, ಇಲ್ಲಿನ ಕುಟುಂಬಗಳು ಸರ್ಕಾರದಿಂದ ಗುರುತಿಸಲ್ಪಟ್ಟ 996 ರೀತಿಯ ಚಿಕಿತ್ಸೆಗಳಿಗೆ ವರ್ಷಕ್ಕೆ 1.50 ಲಕ್ಷ ರೂಪಾಯಿಗಳವರೆಗೆ ಮೆಡಿಕಲ್ ವಿಮೆಯನ್ನು ಪಡೆಯಲಿವೆ.
ಈ ಯೋಜನೆ ಉಭಯ ರಾಜ್ಯಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗಿತ್ತು. ಇದು ಕನ್ನಡಿಗರ ಸ್ವಾಭಿಮಾನ ಕೆಣಕುವ ಪ್ರಯತ್ನ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದ್ದರು.
ಆರೋಗ್ಯ ಯೋಜನೆಯನ್ನು ಕರ್ನಾಟಕ ಸರ್ಕಾರ ತಡೆಯಲು ಮುಂದಾದರೆ, ನಾವದನ್ನು ಹೇಗಾದರೂ ಮಾಡಿ ಜಾರಿಗೊಳಿಸುತ್ತೇವೆ ಎಂದು ಮಹಾರಾಷ್ಟ್ರದ ಶಾಸಕ ಶಂಭುರಾಜ್ ದೇಸಾಯಿ ಇತ್ತೀಚೆಗೆ ಹೇಳಿ ವಿವಾದವನ್ನು ದೊಡ್ಡದು ಮಾಡಿದ್ದರು.