ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ರೋಹಿಣಿ ಸಿಂಧೂರಿಯವರ ಖಾಸಗಿ ವಿಷಯವನ್ನು ಪ್ರಸ್ತಾಪಿಸಿ ಫೋಟೋಗಳನ್ನು ಶೇರ್ ಮಾಡಿದ್ದ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್‌ಗೆ ಸಮನ್ಸ್ ಜಾರಿಯಾಗಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ರೂಪಾ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಿದ್ರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಮ್ಯಾಜಿಸ್ಟ್ರೇಟ್ ಕೋರ್ಟ್ ರೂಪಾ ಮೌದ್ಗಿಲ್‌ಗೆ ಸಮನ್ಸ್ ಜಾರಿಗೊಳಿಸಿದೆ.
ಏ. 26ಕ್ಕೆ ಹಾಜರಾಗುವಂತೆ 8ನೇ ಎಸಿಎಂಎಂ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ರೋಹಿಣಿ ಸಿಂಧೂರಿ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದರು. ಇದು ಕರ್ನಾಟಕ ರಾಜಕೀಯದಲ್ಲಿಯೂ ಭಾರೀ ಚರ್ಚೆಗೆ ಕಾರಣ ಮಾಡಿಕೊಟ್ಟಿತ್ತು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ರೂಪಾ ಹಾಕಿದ್ದ ಪೋಸ್ಟ್‌ಗಳಿಗೆ ಆಕ್ಷೇಪಣೆ ವ್ಯಕ್ತಪಡಿಸಿದ ರೋಹಿಣಿ ಸಿಂಧೂರಿ ಡಿ. ರೂಪಾ ವಿರುದ್ಧ 1 ಕೋಟಿ ರೂಪಾಯಿ ಮಾನನಷ್ಟ ಪರಿಹಾರ ಕೋರಿ ಲೀಗಲ್ ನೋಟಿಸ್ ಜಾರಿ ಮಾಡಿದ್ದರು. ಬಹಿರಂಗ ಕ್ಷಮೆ ಕೇಳಬೇಕು, ಇಲ್ಲದಿದ್ರೆ 1 ಕೋಟಿ ರೂ. ಮಾನನಷ್ಟ ಪರಿಹಾರ ನೀಡಬೇಕು ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿತ್ತು.