Thursday, July 16, 2026
Homeಟಾಪ್ ನ್ಯೂಸ್CM VIJAY: ತಮಿಳುನಾಡು ಸಿಎಂ ವಿಜಯ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್, ಕಾರಣ ಏನು ?

CM VIJAY: ತಮಿಳುನಾಡು ಸಿಎಂ ವಿಜಯ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್, ಕಾರಣ ಏನು ?

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ ಸಿಜೋಸೆಫ್ ವಿಜಯ್ (CM Vijay) ಅವರಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರು ಸ್ಪರ್ಧಿಸಿದ್ದ ಪೆರಂಬೂರ್ ಹಾಗೂ ತಿರುಚಿ ಈಸ್ಟ್ ಕ್ಷೇತ್ರಗಳ ಚುನಾವಣಾ ಗೆಲುವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸರಣಿ ಅರ್ಜಿಗಳ (Election Petitions) ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶ ನೀಡಿದೆ.

ಅರ್ಜಿ ಸಲ್ಲಿಸಿದವರು ಯಾರು?
ಪೆರಂಬೂರ್ ಕ್ಷೇತ್ರದಲ್ಲಿ ಸಿಎಂ ವಿಜಯ್ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದ ಡಿಎಂಕೆ (DMK) ಅಭ್ಯರ್ಥಿ ಆರ್.ಡಿ. ಶೇಖರ್ ಮತ್ತು ಅದೇ ಕ್ಷೇತ್ರದ ಮತದಾರರಾದ ದಿನೇಶ್ ಹಾಗೂ ಲಕ್ಷ್ಮೀನರಸಿಂಹನ್ ಎಂಬುವವರು ವಿಜಯ್ ಗೆಲುವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. ಇದರೊಂದಿಗೆ, ತಿರುಚಿ ಈಸ್ಟ್ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಡಿಎಂಕೆಯ ಎಸ್. ಇನಿಗೋ ಇರುದಯರಾಜ್ ಅವರು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.

ಈ ಎಲ್ಲಾ ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಿದ ನ್ಯಾಯಮೂರ್ತಿ ವಿ. ಲಕ್ಷ್ಮೀನಾರಾಯಣ್ ಅವರ ಪೀಠವು, ಸಿಎಂ ವಿಜಯ್ ಹಾಗೂ ಭಾರತೀಯ ಚುನಾವಣಾ ಆಯೋಗಕ್ಕೆ (ECI) ಮೂರು ವಾರಗಳ ಒಳಗೆ ಉತ್ತರಿಸುವಂತೆ ನಿರ್ದೇಶನ ನೀಡಿದೆ. ಅರ್ಜಿಯಲ್ಲಿರುವ ಕೆಲವು ತಾಂತ್ರಿಕ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವಂತೆ ಅರ್ಜಿದಾರರಿಗೆ ಸೂಚಿಸಿದ ನ್ಯಾಯಾಧೀಶರು, ಪ್ರಾತಿನಿಧ್ಯ ಕಾಯ್ದೆಯ ಅನ್ವಯ ಇಂತಹ ಚುನಾವಣಾ ಅರ್ಜಿಗಳ ವಿಚಾರಣೆಯನ್ನು 6 ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕಿದೆ ಎಂದು ನೆನಪಿಸಿದರು.

ಮಕ್ಕಳ ಮೇಲೆ ಭಾವನಾತ್ಮಕ ಬ್ಲ್ಯಾಕ್‌ಮೇಲ್ ಆರೋಪ
ಸಿಎಂ ವಿಜಯ್ ವಿರುದ್ಧ ಸಲ್ಲಿಕೆಯಾಗಿರುವ ಈ ಅರ್ಜಿಗಳಲ್ಲಿ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಕಳೆದ ಏಪ್ರಿಲ್ 21 ರಂದು ಚೆನ್ನೈನ ಯಂಎಂಸಿಎ (YMCA) ಮೈದಾನದಲ್ಲಿ ನಡೆದಿದ್ದ ತಮ್ಮ ಕೊನೆಯ ಚುನಾವಣಾ ಪ್ರಚಾರದ ಭಾಷಣದಲ್ಲಿ ವಿಜಯ್ ಅವರು, ತಮ್ಮ ಟಿವಿಕೆ ಪಕ್ಷಕ್ಕೆ ಮತ ಹಾಕುವಂತೆ ಹೆತ್ತವರ ಮೇಲೆ ಒತ್ತಡ ಹೇರಲು ಸಣ್ಣ ವಯಸ್ಸಿನ ಮಕ್ಕಳನ್ನು ದಾಳವಾಗಿ ಬಳಸಿಕೊಂಡಿದ್ದಾರೆ. ಮಕ್ಕಳ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಹೆತ್ತವರಿಂದ ಮತ ಸೆಳೆಯಲು ಭಾವನಾತ್ಮಕ ಬ್ಲ್ಯಾಕ್‌ಮೇಲ್ ತಂತ್ರ ಅನುಸರಿಸಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ. ಇದಕ್ಕೆ ಪೂರಕವಾಗಿ ಆ ಭಾಷಣದ ಡಿವಿಡಿ (DVD) ಸಾಕ್ಷ್ಯವನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ಚುನಾವಣಾ ಪ್ರಚಾರ ಹಾಗೂ ರ‍್ಯಾಲಿಗಳಲ್ಲಿ ಅಪ್ರಾಪ್ತ ಮಕ್ಕಳನ್ನು ಬಳಸಿಕೊಳ್ಳಬಾರದು ಎಂಬ ಚುನಾವಣಾ ಆಯೋಗದ ಫೆಬ್ರವರಿ 2024ರ ಕಟ್ಟುನಿಟ್ಟಿನ ನಿರ್ದೇಶನವನ್ನು ಸಿಎಂ ವಿಜಯ್ ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ, ಹೀಗಾಗಿ ಅವರ ಗೆಲುವನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರ ಪರ ಹಿರಿಯ ವಕೀಲ ಪಿ. ವಿಲ್ಸನ್ ವಾದಿಸಿದರು

ಚುನಾವಣಾ ವೆಚ್ಚ ಮರೆಮಾಚುವಿಕೆ ಮತ್ತು ಅಫಿಡವಿಟ್ ಲೋಪದೋಷಗಳು
ಮಕ್ಕಳ ದುರ್ಬಳಕೆ ಮಾತ್ರವಲ್ಲದೆ ಸಿಎಂ ವಿಜಯ್ ಅವರ ವಿರುದ್ಧ ಹಣಕಾಸಿನ ಅಪರಾಧಗಳ ಆರೋಪವನ್ನೂ ಮಾಡಲಾಗಿದೆ. ಸಂಗೀತ ನಿರ್ದೇಶಕ ಎಸ್. ಥಮನ್ ಅವರು ಟಿವಿಕೆ ಪಕ್ಷಕ್ಕಾಗಿ ಧ್ವಜ ಗೀತೆ ಹಾಗೂ ಪ್ರಚಾರದ ಗೀತೆಗಳನ್ನು ಸಂಯೋಜಿಸಿಕೊಟ್ಟಿದ್ದರು. ಆದರೆ ಈ ಸೇವೆಗಾಗಿ ದೊಡ್ಡ ಮೊತ್ತದ ಹಣ ಪಾವತಿಯಾಗಿದ್ದರೂ, ಆ ವೆಚ್ಚವನ್ನು ವಿಜಯ್ ತಮ್ಮ ಅಧಿಕೃತ ಚುನಾವಣಾ ವೆಚ್ಚದ ಪಟ್ಟಿಯಲ್ಲಿ ತೋರಿಸದೆ ಮರೆಮಾಚಿದ್ದಾರೆ. ಇದು ಚುನಾವಣಾ ಆಯೋಗ ನಿಗದಿಪಡಿಸಿರುವ 40 ಲಕ್ಷ ರೂ. ವೆಚ್ಚದ ಮಿತಿಯ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

ಇದಲ್ಲದೆ, ನಾಮಪತ್ರದ ಜೊತೆ ಸಲ್ಲಿಸಲಾದ ಆಸ್ತಿ ಅಫಿಡವಿಟ್‌ನಲ್ಲಿಯೂ ಭಾರಿ ಗೊಂದಲಗಳಿವೆ. ಅಫಿಡವಿಟ್‌ನ ಭಾಗ ಎ ನಲ್ಲಿ ತಮಗೆ 3.44 ಕೋಟಿ ರೂಪಾಯಿ ಆದಾಯ ತೆರಿಗೆ ಬಾಕಿ ಇದೆ ಎಂದು ನಮೂದಿಸಿರುವ ವಿಜಯ್, ಮತದಾರರಿಗೆ ಪ್ರದರ್ಶಿಸಲಾಗುವ ಭಾಗ ಬಿ (ಸಾರಾಂಶ) ನಲ್ಲಿ ಸರ್ಕಾರದ ಯಾವುದೇ ಬಾಕಿ ಉಳಿಸಿಕೊಂಡಿಲ್ಲ (Nil) ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಅರ್ಜಿದಾರರು ಕೋರ್ಟ್ ಗಮನಕ್ಕೆ ತಂದಿದ್ದಾರೆ. ಜೊತೆಗೆ, ಏಪ್ರಿಲ್ 19 ರಂದು ಸೆಂಟ್ ಆಂಟನಿ ಚರ್ಚ್ ಒಳಗೆ ರಾಜಕೀಯ ಪ್ರಚಾರ ನಡೆಸಿ ಧಾರ್ಮಿಕ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಇದನ್ನೂ ಓದಿ: ಬದರಿನಾಥ ದೇವಸ್ಥಾನದ ಕಾಣಿಕೆ ಎಣಿಕೆಯಲ್ಲಿ ಅಕ್ರಮ ಆರೋಪ: ಉನ್ನತ ಮಟ್ಟದ ತನಿಖೆಗೆ ಸಿಎಂ ಧಾಮಿ ಆದೇಶ

ಹೆಚ್ಚಿನ ಸುದ್ದಿ

Change Language »
error: Content is protected !!