ಭೋಪಾಲ್: ಮಧ್ಯಪ್ರದೇಶದ (Madhyapradesh) ಉಜ್ಜಯಿನಿಯಲ್ಲಿರುವ ಸಾಮ್ರಾಟ್ ವಿಕ್ರಮಾದಿತ್ಯ ವಿಶ್ವವಿದ್ಯಾಲಯದ ಪರೀಕ್ಷಾ ಪತ್ರಿಕೆಯಲ್ಲಿ ಕೇಳಲಾದ ಒಂದು ವಿವಾದಾತ್ಮಕ ಪ್ರಶ್ನೆಯು ಈಗ ರಾಜ್ಯಾದ್ಯಂತ ರಾಜಕೀಯ ಮತ್ತು ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಿದೆ. ಬಿ.ಕಾಂ, ಬಿ.ಬಿ.ಎ ಮತ್ತು ಬಿ.ಸಿ.ಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನಡೆಸಲಾದ ಫೌಂಡೇಶನ್ ಕೋರ್ಸ್ ಪರೀಕ್ಷೆಯಲ್ಲಿ ಈ ಘಟನೆ ನಡೆದಿದೆ.
ವಿವಾದ ಸೃಷ್ಟಿ ಮಾಡಿದ ಪ್ರಶ್ನೆ ಪತ್ರಿಕೆ
ಸೋಮವಾರ ನಡೆದ ಪರೀಕ್ಷೆಯ ಪ್ರಶ್ನೆಪತ್ರಿಕೆಯ 45ನೇ ಪ್ರಶ್ನೆಯು ವಿವಾದದ ಕೇಂದ್ರಬಿಂದುವಾಗಿದೆ. ಆ ಪ್ರಶ್ನೆಯಲ್ಲಿ ಅಲ್ಲಾಹನ ಹೊರತಾಗಿ ಬೇರೆ ಯಾರೂ ಇಲ್ಲ ಎಂದು ಹೇಳಲಾಗಿದ್ದು, ಅದಕ್ಕೆ ಸರಿಯಾದ ಉತ್ತರವನ್ನು ಆರಿಸಲು ಸೋಮೇಶ್ವರ, ಖುದಾ, ಶಕ್ತಿವಾನ್ ಮತ್ತು ಶಿಕ್ಷಿಸುವವನು ಎಂಬ ನಾಲ್ಕು ಆಯ್ಕೆಗಳನ್ನು ನೀಡಲಾಗಿತ್ತು. ಒಬ್ಬ ವಿದ್ಯಾರ್ಥಿಯು ಈ ಪ್ರಶ್ನೆಯನ್ನು ಗಮನಿಸಿ ಆಕ್ಷೇಪ ಎತ್ತಿದ ಬೆನ್ನಲ್ಲೇ, ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು.
ವಿಷಯ ತಿಳಿಯುತ್ತಿದ್ದಂತೆಯೇ ಹಲವಾರು ಬಲಪಂಥೀಯ ಸಂಘಟನೆಗಳು ವಿಶ್ವವಿದ್ಯಾಲಯದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿವೆ. ಇದು ಕೇವಲ ಆಕಸ್ಮಿಕ ತಪ್ಪಲ್ಲ, ಬದಲಿಗೆ ಒಂದು ನಿರ್ದಿಷ್ಟ ಸಿದ್ಧಾಂತವನ್ನು ಹೇರುವ ಯೋಜಿತ ಸಂಚು ಎಂದು ಸಂಘಟನೆಗಳು ಆರೋಪಿಸಿವೆ. ತಪ್ಪಿತಸ್ಥ ಅಧಿಕಾರಿಗಳು ಮತ್ತು ಪ್ರಶ್ನೆಪತ್ರಿಕೆ ಸಿದ್ಧಪಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿವೆ.
ತನಿಖೆಗೆ ಆದೇಶ ನೀಡಿದ ಆಡಳಿತ ಮಂಡಳಿ
ವಿವಾದ ತಾರಕಕ್ಕೇರುತ್ತಿದ್ದಂತೆಯೇ ಎಚ್ಚೆತ್ತ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ತನಿಖೆಗೆ ಆದೇಶಿಸಿದೆ. ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅನಿಲ್ ಕುಮಾರ್ ಶರ್ಮಾ ಮಾತನಾಡಿ, ಯಾವುದೇ ಪ್ರಶ್ನೆಯು ವಿವಾದಾತ್ಮಕವಾಗಿ ಕಂಡುಬಂದಲ್ಲಿ ಅದನ್ನು ಪರೀಕ್ಷಾ ಸಮಿತಿಗೆ ವಹಿಸಲಾಗುತ್ತದೆ. ಈ ಪ್ರಕರಣವನ್ನೂ ಸಮಿತಿಗೆ ವಹಿಸಲಾಗಿದ್ದು, ವಿಷಯ ತಜ್ಞರು ಈ ಪ್ರಶ್ನೆಯು ಪಠ್ಯಕ್ರಮಕ್ಕೆ ಅನುಗುಣವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲಿದ್ದಾರೆ. ತಪ್ಪು ಕಂಡುಬಂದಲ್ಲಿ ಸಂಬಂಧಪಟ್ಟ ಪರೀಕ್ಷಕರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಈ ಘಟನೆಯು ಮುಖ್ಯಮಂತ್ರಿ ಮೋಹನ್ ಯಾದವ್ ಅವರ ತವರು ಜಿಲ್ಲೆಯಾದ ಉಜ್ಜಯಿನಿಯಲ್ಲಿ ನಡೆದಿರುವುದು ವಿಷಯದ ಗಂಭೀರತೆಯನ್ನು ಹೆಚ್ಚಿಸಿದೆ. ಶೈಕ್ಷಣಿಕ ವಲಯ ಮೀರಿ ಈ ವಿವಾದ ಈಗ ರಾಜಕೀಯ ವಲಯದಲ್ಲೂ ಚರ್ಚೆಯಾಗುತ್ತಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಇಂತಹ ಲೋಪಗಳು ಹೇಗೆ ಸಂಭವಿಸುತ್ತವೆ ಎಂಬ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ. ತನಿಖೆಯ ವರದಿ ಬಂದ ನಂತರ ಆ ವಿವಾದಾತ್ಮಕ ಪ್ರಶ್ನೆಯನ್ನು ಮೌಲ್ಯಮಾಪನದಿಂದ ಕೈಬಿಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದನ್ನೂ ಓದಿ : ಮುಸ್ಲಿಂ ಪುರುಷರು ಬಹುಪತ್ನಿತ್ವ ಹೊಂದುವುದು ಅಪರಾಧವಲ್ಲ – ಹೈಕೋರ್ಟ್ ಮಹತ್ವದ ತೀರ್ಪು