ಟೆಂಡರ್ ನೀಡಲು ಕೋಟ್ಯಾಂತರ ರೂ. ಲಂಚ ಸ್ವೀಕರಿಸಿದ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಚೆನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ವಿಚಾರಣಾಧೀನ ಬಂಧನದ ಅವಧಿ ಶನಿವಾರಕ್ಕೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಇಂದು ಮತ್ತೆ ಮಾಡಾಳು ವಿರೂಪಾಕ್ಷಪ್ಪನವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಿರುವ ಲೋಕಾಯುಕ್ತ ಅಧಿಕಾರಿಗಳು, ತನಿಖೆಯು ಇನ್ನೂ ಬಾಕಿಯಿರುವ ಹಿನ್ನೆಲೆಯಲ್ಲಿ ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆಗಳಿವೆ.
ಲೋಕಾಯುಕ್ತ ಈ ಕುರಿತು ಕಳೆದ ಐದು ದಿನಗಳಿಂದ ಸಾಕಷ್ಟು ಮಾಹಿತಿ ಕಲೆಹಾಕಿದ್ದು, ತನಿಖಾಧಿಕಾರಿಗಳು ಮಾಡಾಳ್ ವಿರೂಪಾಕ್ಷಪ್ಪನವರ ಮೊಬೈಲ್‍ನಲ್ಲಿ ಡಿಲೀಟ್ ಮಾಡಲಾಗಿದ್ದ ಮಾಹಿತಿಗಳನ್ನೂ ಸಹ ಹೊರಗೆಳೆಯುವ ಪ್ರಯತ್ನದಲ್ಲಿ ತೊಡಗಿದ್ದಾರೆಂದು ತಿಳಿದುಬಂದಿದೆ. ಈ ಮಾಹಿತಿಯ ಆಧಾರದ ಮೇಲೆ ವಿರೂಪಾಕ್ಷಪ್ಪನವರನ್ನು ತನಿಖೆಗೆ ಒಳಪಡಿಸಲಾಗಿದೆ. ಜೊತೆಗೆ ವಿರೂಪಾಕ್ಷಪ್ಪ ಅಧಿಕಾರಾವಧಿಯಲ್ಲಿ ನೀಡಿದ್ದ ನೂರಕ್ಕೂ ಹೆಚ್ಚು ಪ್ರಮುಖ ಟೆಂಡರ್‍ಗಳನ್ನು ಮರುಪರಿಶೀಲನೆಗೊಳಪಡಿಸುವ ಸಾಧ್ಯತೆಯಿದೆ.
ಆದರೆ ತನಿಖೆಗೆ ಮಾಡಾಳ್ ವಿರೂಪಾಕ್ಷಪ್ಪ ಸೂಕ್ತವಾಗಿ ಸ್ಪಂದಿಸುತ್ತಿಲ್ಲವೆಂದು ತಿಳಿದುಬಂದಿದ್ದು, ಹೀಗಾಗಿ ವಿಚಾರಣಾಧೀನ ಬಂಧನದ ಅವಧಿಯನ್ನು ವಿಸ್ತರಿಸುವಂತೆ ಲೋಕಾಯುಕ್ತ ಅಧಿಕಾರಿಗಳು ಇಂದು ನ್ಯಾಯಾಲಯದಲ್ಲಿ ಮನವಿ ಮಾಡುವ ಸಾಧ್ಯತೆಯಿದೆ.