ನವದೆಹಲಿ: ಲೋಕಸಭೆಯಲ್ಲಿ ಸಂಸತ್ ಅಧಿವೇಶನದ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಿಂದಿ ಭಾಷೆಗೆ ಸಂಬಂಧಿಸಿದಂತೆ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಹೇಳಿಕೆ ಇದೀಗ ಸಾಕಷ್ಟು ಚರ್ಚೆಯಾಗುತ್ತಿದೆ.
‘ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಮಸೂದೆ 2024’ ಕುರಿತ ಚರ್ಚೆಯ ಸಂದರ್ಭದಲ್ಲಿ ವಿತ್ತ ಸಚಿವರು, ತಮಿಳುನಾಡಿನಲ್ಲಿ ಹಿಂದಿ ಓದುವುದನ್ನು ಕ್ರೈಂ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದರು. ಬಾಲ್ಯದಿಂದಲೂ ಹಿಂದಿ ಕಲಿಯದಂತೆ ತಡೆಯುತ್ತಿದ್ದರು ಎಂದರು. ಆದರೆ ಇದೀಗ ಬ್ಯಾಂಕಿಂಗ್ ಸಂಬಂಧಿತ ಮಸೂದೆಯ ಚರ್ಚೆಯಲ್ಲಿ ಹಿಂದಿಯ ಮೇಲಿನ ಚರ್ಚೆ ಇದ್ದಕ್ಕಿದ್ದಂತೆ ಹೇಗೆ ಪ್ರಾರಂಭವಾಯಿತು? ಎಂಬುದನ್ನು ನೋಡೋಣ..
ಹಣಕಾಸು ಸಚಿವರು ಸದನದಲ್ಲಿ ಹಿಂದಿ ಭಾಷೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದರು. ಸಮಾಜವಾದಿ ಪಕ್ಷದ ನಾಯಕ ರಾಜೀವ್ ರಾಯ್ ಬರೆದ ಪತ್ರವನ್ನು ಅವರು ಉಲ್ಲೇಖಿಸಿದ್ದಾರೆ. ಆಗ ಕೆಲ ಸದಸ್ಯರು ವಿತ್ತ ಸಚಿವೆಯನ್ನು ಹಿಂದಿ ವಿಚಾರವಾಗಿ ಕಾಲೆಳೆದರು. ಈ ವೇಳೆ ಸಚಿವೆ, ನನ್ನ ಹಿಂದಿ ಭಾಷೆ ಅಷ್ಟು ಚೆನ್ನಾಗಿಲ್ಲ. ನನಗೆ ಹಿಂದಿ ಪದಗಳು ಅಷ್ಟಾಗಿ ಅರ್ಥವಾಗುವುದಿಲ್ಲ ಎಂದು ತಿಳಿಸಿದರು.
”मैं ऐसे स्टेट से आती हूं जहां हिंदी पढ़ना गुनाह लगता है”
कांग्रेस सांसद गौरव गोगोई और वित्त मंत्री निर्मला सीतारमण के बीच बहस #NirmalaSitharaman #GauravGogoi pic.twitter.com/h68MTAnEDp
— Khabargaon (@khabar_gaon) December 4, 2024
ಇದಕ್ಕೆ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಹಣಕಾಸು ಸಚಿವರು ಹಿಂದಿಯನ್ನು ತಮಾಷೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ಸ್ಪಷ್ಟನೆ ನೀಡಿದ ನಿರ್ಮಲಾ, ನಾನು ನನ್ನ ಹಿಂದಿಯನ್ನು ಗೇಲಿ ಮಾಡುತ್ತಿದ್ದೇನೆ. ಏಕೆಂದರೆ ನಾನು ಹಿಂದಿ ಓದುವುದನ್ನು ಕ್ರೈಂ ಎಂದು ಪರಿಗಣಿಸುವ ರಾಜ್ಯದಿಂದ ಬಂದವಳು ಎಂದಿದ್ದಾರೆ.
ನಿರ್ಮಲಾ ಸೀತಾರಾಮನ್ ತಮಿಳುನಾಡಿನಿಂದ ಬಂದವರು. ಅಲ್ಲಿನ ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ) ಪಕ್ಷದ ನಾಯಕರು ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು. ಈ ಕುರಿತು ಅವರು, ಹಿಂದಿ ಕಲಿಯಲು (ತಮಿಳುನಾಡು) ವಾತಾವರಣವು ಅನುಕೂಲಕರವಾಗಿರಲಿಲ್ಲ. ಇದನ್ನು ನನ್ನ ವೈಯಕ್ತಿಕ ಅನುಭವದಿಂದ ಹೇಳುತ್ತೇನೆ. ಶಾಲೆಯಲ್ಲಂತೂ ಹಿಂದಿ ಕಲಿಯಲು ಬಯಸಿದ್ದಕ್ಕಾಗಿ ತಮಿಳುನಾಡಿನ ಬೀದಿಗಳಲ್ಲಿ ಅಪಹಾಸ್ಯಕ್ಕೊಳಗಾಗಿದ್ದೆ. ಇದು ನನ್ನ ಸ್ವಂತ ಅನುಭವ ಎಂದರು.
ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಸ್ತಾಪಿಸಿದರು. ಪ್ರತಿಯೊಂದು ರಾಜ್ಯವೂ ತನ್ನದೇ ಆದ ಭಾಷೆಯನ್ನು ಹೊಂದಲು ಪ್ರಧಾನಿ ಮೋದಿ ಪ್ರೋತ್ಸಾಹಿಸಿದ್ದಾರೆ. ಅವರು ತಮಿಳು ಸೇರಿದಂತೆ ಎಲ್ಲಾ ಸ್ಥಳೀಯ ಭಾಷೆಗಳ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.