ಪ್ರತಿ ಹಬ್ಬಕ್ಕೂ ಒಂದೊಂದು ಸಿಹಿ ಅಡುಗೆ ಮಾಡೋದು ಕಾಮನ್. ಅಲ್ಲದೇ ಇಂದು ದೇಶದಾದ್ಯಂತ ಬಹಳ ವಿಜೃಂಭಣೆಯಿಂದ ಹೋಳಿ ಹಬ್ಬ ಆಚರಿಸಲಾಗುತ್ತಿದೆ. ಸಿಹಿ ಇಲ್ಲದೆ ಹಬ್ಬ ಅಪರಿಪೂರ್ಣ ಅಂತಾನೇ ಹೇಳಬಹುದು. ಈ ಹಬ್ಬದಲ್ಲಿ ಜನರು ಬಣ್ಣದಾಟದ ಜೊತೆ ಪರಸ್ಪರ ಸಿಹಿ ತಿನ್ನಿಸುವ ಮೂಲಕ ಹಬ್ಬದ ಸಂತೋಷವನ್ನು ಹಂಚಿಕೊಳ್ಳುತ್ತಾರೆ. ಸಾಮಾನ್ಯವಾಗಿ ಹಬ್ಬದ ದಿನ ಹೆಚ್ಚಿನವರು ವಿವಿಧ ಬಗೆಯ ಸಿಹಿ ತಿನಿಸುಗಳನ್ನು ಮಾರುಕಟ್ಟೆಯಿಂದ ಖರೀದಿಸುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿಹಿ ತಿನಿಸುಗಳು ಆರೋಗ್ಯಕರವಾದವು ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಸಿಹಿ ತಿಂಡಿಗಳನ್ನು ಕಲಬೆರಕೆ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಹೀಗಿರುವಾಗ ಆರೋಗ್ಯದ ದೃಷ್ಟಿಯಿಂದ ನೀವು ಮನೆಯಲ್ಲಿಯೇ ಸುಲಭವಾಗಿ ಸಿಹಿ ತಿನಿಸುಗಳನ್ನು ತಯಾರಿಸುವ ಮೂಲಕ ಹಬ್ಬವನ್ನು ವಿಶೇಷವಾಗಿ ಆಚರಿಸಬಹುದು. ಈ ಬಾರಿಯ ಹೋಳಿ ಹಬ್ಬಕ್ಕೆ ಮನೆಯಲ್ಲಿಯೇ 7 ಕಪ್ ಸ್ವೀಟ್ ತಯಾರಿಸಬಹುದಾಗಿದ್ದು, ಮಾಡುವುದೇಗೆ ಎಂಬುದರ ಮಾಹಿತಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು
ಕಡ್ಲೆ ಹಿಟ್ಟು-1 ಕಪ್
ತೆಂಗಿನ ಕಾಯಿ ತುರಿ-1 ಕಪ್
ಹಾಲು-1 ಕಪ್
ಸಕ್ಕರೆ-2ರಿಂದ ಮೂರು ಕಪ್
ತುಪ್ಪ-1 ಕಪ್
ಮಾಡುವ ವಿಧಾನ
ಮೊದಲಿಗೆ ತೆಂಗಿನ ಕಾಯಿ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಸ್ವಲ್ಪ ಹಾಲನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಅದನ್ನು ಪಕ್ಕದಲ್ಲಿಟ್ಟುಕೊಳ್ಳಿ. ಬೇಗನೆ ಸೀದು ಹೋಗದ ಬಾಣಲೆಯಾದರೆ ಉತ್ತಮ, ಬಾಣಲೆ ತೆಗೆದುಕೊಂಡು ಅದಕ್ಕೆ ತುಪ್ಪ ಹಾಕಿ ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಗಡ್ಡಿ ಸಿಗಬಾರದು.
ನಂತರ ಇದಕ್ಕೆ ರುಬ್ಬಿಟ್ಟ ತೆಂಗಿನ ಕಾಯಿ ತುರಿ, ನಂತರ ಸಕ್ಕರೆ ಹಾಕಿ ಚೆನ್ನಾಗಿ ಕೈಯಾಡಿಸುತ್ತಾ ಬರಬೇಕು. ಪಾಕ ತಳ ಬಿಡುತ್ತಾ ಬಂದಾಗ ತುಪ್ಪ ಸವರಿದ ತಟ್ಟೆಗೆ ಹರಡಿ ಸ್ವಲ್ಪ ಆರಿದ ಮೇಲೆ ಕತ್ತರಿಸಿ ತಿನ್ನಿ.