ಈ ವರ್ಷ ದೇಶವು 76ನೇ ವರ್ಷದ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. ಈ ಬಾರಿ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ದೇಶಾದ್ಯಂತ ಸಕಲ ಸಿದ್ಧತೆಗಳು ನಡೆಯುತ್ತಿವೆ. ಗಣರಾಜ್ಯೋತ್ಸವದ ಪರೇಡ್ ಪೂರ್ವಾಭ್ಯಾಸಗಳು ಮತ್ತು ಬೀಟಿಂಗ್ ದಿ ರಿಟ್ರೀಟ್ ಸಮಾರಂಭಗಳನ್ನು ಈಗಾಗಲೇ ಎಲ್ಲಾ ಭಾರತೀಯ ರಾಜ್ಯಗಳ ರಾಜಧಾನಿಗಳಲ್ಲಿ ಅಭ್ಯಾಸ ಮಾಡಲಾಗುತ್ತಿದೆ. ದೇಶದಲ್ಲಿ ಸ್ವಾತಂತ್ರ್ಯ ದಿನವನ್ನು ಹೇಗೆ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆಯೋ ಅದೇ ರೀತಿಯಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ದಿನವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಈ ದಿನ ಖಂಡಿತ ಪ್ರತಿಯೊಬ್ಬ ಭಾರತೀಯರಿಗೆ ಹೆಮ್ಮೆಯ ದಿನವಾಗಿದೆ.
ಹಾಗಿದ್ರೆ ಇಲ್ಲಿ ನಾವು ಗಣರಾಜ್ಯೋತ್ಸವದ ಇತಿಹಾಸ, ಮಹತ್ವ ಮತ್ತು ಈ ವರ್ಷದ ಥೀಮ್ ಏನು? ಎಂಬುದರ ಬಗ್ಗೆ ತಿಳಿಯೋಣ.
ಗಣರಾಜ್ಯೋತ್ಸದ ಇತಿಹಾಸ ಮತ್ತು ಮಹತ್ವ:
ಗಣರಾಜ್ಯೋತ್ಸವವು ಜನವರಿ 26, 1950 ರಂದು ಭಾರತದ ಸಂವಿಧಾನದ ಅಂಗೀಕಾರವನ್ನು ನೆನಪಿಸುತ್ತದೆ. ಭಾರತವು 1947 ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆದ ನಂತರ ಅಂದರೆ ಜನವರಿ 26, 1950ರಲ್ಲಿ ಸಂವಿಧಾನವನ್ನು ಜಾರಿಗೆ ತಂದಿತು.
ಅಂದಿನಿಂದ ರಾಜ ಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವ ಅಂದರೆ ಸಾರ್ವಭೌಮ ದೇಶವಾಯಿತು. ಈ ಈ ಸುಸಂದರ್ಭವನ್ನು ಗಣರಾಜ್ಯ ಎಂದು ಘೋಷಿಸಿ ಅಂದಿನಿಂದ ಜನವರಿ 26 ಅನ್ನು ರಿಪಬ್ಲಿಕ್ ಡೇ ಎನ್ನುವುದಾಗಿ ಆಚರಿಸಲಾಗುತ್ತದೆ.
ಸಂವಿಧಾನ ಸಭೆಯು ತನ್ನ ಮೊದಲ ಅಧಿವೇಶನವನ್ನು ಡಿಸೆಂಬರ್ 9, 1946 ರಂದು ಮತ್ತು ಕೊನೆಯ ಅಧಿವೇಶನವನ್ನು ನವೆಂಬರ್ 26, 1949 ರಂದು ನಡೆಸಿತು. ಆಮೇಲೆ ಒಂದು ವರ್ಷದ ನಂತರ ಸಂವಿಧಾನವನ್ನು ಅಂಗೀಕರಿಸಲಾಯಿತು. ಡಾ ಬಿಆರ್ ಅಂಬೇಡ್ಕರ್ ಅವರು ಸಂವಿಧಾನದ ಕರಡು ಸಮಿತಿಯ ನೇತೃತ್ವ ವಹಿಸಿದ್ದರು ಮತ್ತು ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ರ ಸವಿನೆನಪಿಗಾಗಿ ಭಾರತವು ಪ್ರತಿ ವರ್ಷ ನವೆಂಬರ್ 26ರಂದು ಸಂವಿಧಾನ ದಿನವನ್ನು ಆಚರಿಸುತ್ತದೆ.
ಜನವರಿ 26ರಂದೇ ಆಚರಣೆ ಏಕೆ ?
1929 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ, ಪೂರ್ಣ ಸ್ವರಾಜ್ ಘೋಷಣೆ ಅಥವಾ “ಭಾರತದ ಸ್ವಾತಂತ್ರ್ಯದ ಘೋಷಣೆ” ಯನ್ನು ಘೋಷಿಸಲಾಯಿತು, ಮತ್ತು 26 ಜನವರಿಯನ್ನು 1930 ರಲ್ಲಿ ಸ್ವಾತಂತ್ರ್ಯ ದಿನವೆಂದು ಘೋಷಿಸಲಾಯಿತು. ಆದರೆ ಈ ಹೆಬ್ಬಯಕೆ 1947ರ ವರೆಗೂ ಈಡೇರಲಿಲ್ಲ. ನಂತರ ಸ್ವಾತಂತ್ರ್ಯ ಸಿಕ್ಕು ಸಂವಿಧಾನ ಜಾರಿ ಮಾಡುವ ಸಮಯದಲ್ಲಿ ಹಳೆಯ ನಿರ್ಣಯದಂತೆ ಜನವರಿ 26 ಅನ್ನು ಆಯ್ಕೆ ಮಾಡಿಕೊಂಡು ಸಂವಿಧಾನವನ್ನು ಜಾರಿಗೊಳಿಸಲಾಯಿತು. ಅಂದಿನಿಂದ ದೇಶ ಗಣರಾಜ್ಯವಾಗಿ ಹೊರಹೊಮ್ಮಿತು.
ಇನ್ನು ದೇಶದಲ್ಲಿ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು, ಅಧ್ಯಕ್ಷರು ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ ಮತ್ತು ನಂತರ ಅದ್ಭುತವಾದ ಮಿಲಿಟರಿ ಮತ್ತು ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸುತ್ತಾರೆ. ಹಾಗೆಯೇ ಭಾರತದ ರಾಷ್ಟ್ರಪತಿಗಳು ದೇಶದ ಅರ್ಹ ನಾಗರಿಕರಿಗೆ ಪದ್ಮ ಪ್ರಶಸ್ತಿಗಳನ್ನು ವಿತರಿಸುತ್ತಾರೆ ಮತ್ತು ವೀರ ಸೈನಿಕರಿಗೆ ಪರಮವೀರ ಚಕ್ರ, ಅಶೋಕ ಚಕ್ರ ಮತ್ತು ವೀರ ಚಕ್ರವನ್ನು ನೀಡಲಾಗುತ್ತದೆ.
ಮೆರವಣಿಗೆ ಸಮಯ ಮತ್ತು ಥೀಮ್:
ಗಣರಾಜ್ಯೋತ್ಸವ 2025ರ ಪರೇಡ್ ಥೀಮ್ ‘‘ಸುವರ್ಣ ಭಾರತ: ಪರಂಪರೆ ಮತ್ತು ಪ್ರಗತಿ‘ ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿದ್ದು, ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಅದರ ಬೆಳವಣಿಗೆ ಮತ್ತು ಅಭಿವೃದ್ಧಿಯ ಪ್ರಯಾಣವನ್ನು ಎತ್ತಿ ತೋರಿಸುತ್ತದೆ.ಆಂಧ್ರಪ್ರದೇಶ, ಬಿಹಾರ, ಚಂಡೀಗಢ, ಗೋವಾ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ ಮತ್ತು ಮಧ್ಯಪ್ರದೇಶ ಸೇರಿದಂತೆ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಟ್ಯಾಬ್ಲೋಗಳು ಕರ್ತವ್ಯ ಪಥ ಮೆರವಣಿಗೆಯಲ್ಲಿ ಕಾಣಿಸಿಕೊಳ್ಳಲಿವೆ. ಹೆಚ್ಚುವರಿಯಾಗಿ, 11 ಕೇಂದ್ರ ಸರ್ಕಾರಿ ತುಕಡಿಗಳು ಈ ಭವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.
ಈ ವರ್ಷದ ಅತಿಥಿ ಯಾರು?
ಗಣರಾಜ್ಯೋತ್ಸವ ಪ್ರಮುಖ ವಿಶೇಷತೆ ಎಂದರೆ ಅತಿಥಿಗಳು. ಹೌದು ಪ್ರತಿವರ್ಷ ಭಾರತವು ವಿದೇಶಿ ಗಣ್ಯರಿಗೆ ಆಹ್ವಾನ ನೀಡುತ್ತದೆ. ಅದರಂತೆ ಈ ವರ್ಷ ಗಣತಂತ್ರ ದಿನಕ್ಕೆ ವಿಶೇಷ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಆಗಮಿಸುತ್ತಿದ್ದಾರೆ.