ಚಾಮರಾಜನಗರ : ಕಾಡಂಚಿನ ಗ್ರಾಮಗಳಲ್ಲಿ ವನ್ಯಮೃಗಗಳ ಹಾವಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಚಾಮರಾಜನಗರ (Chamarajnagar) ಜಿಲ್ಲೆಯಲ್ಲಿ ಚಿರತೆಯೊಂದು (Leopard attack) ಜನವಸತಿ ಪ್ರದೇಶಕ್ಕೆ ನುಗ್ಗಿ, ಮನೆಯ ಮುಂದೆ ಕುಳಿತಿದ್ದ ಅಜ್ಜಿ ಮತ್ತು ಐದು ವರ್ಷದ ಪುಟ್ಟ ಮಗುವಿನ ಮೇಲೆ ಏಕಾಏಕಿ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಈ ರಕ್ತಸಿಕ್ತ ಘಟನೆಯಿಂದಾಗಿ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.
ಹೊಂಚು ಹಾಕಿ ಅಜ್ಜಿಯ ಮೇಲೆ ಮುಗಿಬಿದ್ದ ಚಿರತೆ
ಹನೂರು ತಾಲೂಕಿನ ಮೀಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟೆಗೆರೆ ಗ್ರಾಮದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ಗ್ರಾಮದ ನಿವಾಸಿ ಶಿವಮ್ಮ ಎಂಬುವವರು ಎಂದಿನಂತೆ ತಮ್ಮ ಮನೆಯ ಬಾಗಿಲ ಬಳಿ ಕುಳಿತಿದ್ದರು. ಈ ವೇಳೆ ಯಾರಿಗೂ ತಿಳಿಯದಂತೆ ಹೊಂಚು ಹಾಕಿ ಬಂದ ಚಿರತೆ, ಏಕಾಏಕಿ ಶಿವಮ್ಮ ಅವರ ಮೇಲೆ ಎರಗಿದೆ. ಈ ಹಠಾತ್ ದಾಳಿಯಿಂದ ಗಾಬರಿಗೊಂಡ ಅವರು ಪ್ರಾಣಭಯದಿಂದ ಜೋರಾಗಿ ಕಿರುಚಿಕೊಂಡಿದ್ದಾರೆ.
ಏನಾಯಿತೆಂದು ನೋಡಲು ಬಂದ ಕಂದಮ್ಮನ ಮೇಲೆ ಅಟ್ಯಾಕ್
ಅಜ್ಜಿಯ ಆರ್ತನಾದ ಕೇಳಿ ಮನೆಯೊಳಗಿದ್ದ ಐದು ವರ್ಷದ ಪುಟ್ಟ ಮೊಮ್ಮಗಳು ಹರ್ಷಿತಾ, ಏನಾಯಿತು ಎಂದು ನೋಡಲು ಓಡಿ ಬಂದಿದ್ದಾಳೆ. ಶಿವಮ್ಮ ಕಿರುಚಿಕೊಂಡಾಗ ಚಿರತೆಯು ಅಲ್ಲಿಂದ ಓಡಿಹೋಗದೆ ಮನೆಯ ಪಕ್ಕದಲ್ಲೇ ಅಡಗಿ ಕುಳಿತಿತ್ತು. ಹೊರಗೆ ಬಂದ ಪುಟ್ಟ ಮಗುವನ್ನು ಕಂಡ ತಕ್ಷಣ ಚಿರತೆ ಆಕೆಯ ಮೇಲೂ ಭೀಕರವಾಗಿ ದಾಳಿ ನಡೆಸಿ ಹೊತ್ತೊಯ್ಯಲು ಯತ್ನಿಸಿದೆ. ಅಜ್ಜಿ ಮತ್ತು ಮಗುವಿನ ಚೀರಾಟ ಕೇಳಿ ಎಚ್ಚೆತ್ತ ಅಕ್ಕಪಕ್ಕದ ನಿವಾಸಿಗಳು ತಕ್ಷಣವೇ ಲಾಠಿ ಹಾಗೂ ಕಲ್ಲುಗಳೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಒಟ್ಟಾಗಿ ಬಂದ ಜನಸ್ತೋಮವನ್ನು ಕಂಡು ಹೆದರಿದ ಚಿರತೆ ಕೊನೆಗೂ ಮಗುವನ್ನು ಬಿಟ್ಟು ಕಾಡಿನತ್ತ ಓಡಿ ಹೋಗಿದೆ.
ಆಸ್ಪತ್ರೆಗೆ ದಾಖಲಾದ ಗಾಯಾಳುಗಳು
ಚಿರತೆಯ ಪಂಜದ ಏಟಿನಿಂದ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಜ್ಜಿ ಶಿವಮ್ಮ ಮತ್ತು ಬಾಲಕಿ ಹರ್ಷಿತಾಳನ್ನು ಗ್ರಾಮಸ್ಥರು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರಿಗೂ ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಮನೆಯ ಮುಂದೆಯೇ ಈ ರೀತಿ ಪ್ರಾಣಿ ದಾಳಿ ನಡೆಸಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.
ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ತೀವ್ರ ಆಕ್ರೋಶ
ಈ ಭಾಗದಲ್ಲಿ ಚಿರತೆಗಳ ಸಂಚಾರ ಹೆಚ್ಚಾಗುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಟ್ಟೆಗೆರೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಗಲು ಹೊತ್ತಿನಲ್ಲೇ ಮನೆ ಬಾಗಿಲಿಗೆ ಬಂದು ದಾಳಿ ಮಾಡುತ್ತಿರುವುದರಿಂದ ಮಕ್ಕಳು ಹಾಗೂ ವೃದ್ಧರ ರಕ್ಷಣೆ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇಲಾಖೆಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ದಾಳಿ ಮಾಡಿದ ಚಿರತೆಯನ್ನು ಸೆರೆಹಿಡಿಯಲು ಗ್ರಾಮದಲ್ಲಿ ಬೋನು ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಯು.ಟಿ.ಖಾದರ್ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ ಸಚಿವರು!