ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ ಹತರಾಗಿದ್ದ ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ( Ayatollah Khamenei) ಅವರ ಅಂತ್ಯಕ್ರಿಯೆಯ ಮೆರವಣಿಗೆಯ ಸಂದರ್ಭದಲ್ಲಿ ಇರಾನ್ (Iran) ನಿವಾಸಿಗಳು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದೈತ್ಯ ಪ್ರತಿಕೃತಿಗೆ (Effigy) ಸಾರ್ವಜನಿಕವಾಗಿ ಬೆಂಕಿ ಹಚ್ಚಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ವೀಡಿಯೊಗಳು ಭಾರಿ ವೈರಲ್ ಆಗುತ್ತಿವೆ.
ಡೊನಾಲ್ಡ್ ಟ್ರಂಪ್ ಅವರ ಸಿಗ್ನೇಚರ್ ಉಡುಪಾದ ನೀಲಿ ಸೂಟ್ ಮತ್ತು ಕೆಂಪು ಟೈ ಧರಿಸಿರುವ ದೊಡ್ಡ ಗಾತ್ರದ ಬೊಂಬೆಯನ್ನು ಮೊದಲು ಕ್ರೇನ್ ಮೂಲಕ ನೇತುಹಾಕಲಾಗಿತ್ತು. ನಂತರ ಅದಕ್ಕೆ ಮೃತರ ಸಮ್ಮುಖದಲ್ಲೇ ಬೆಂಕಿ ಹಚ್ಚಿ ಭಸ್ಮಗೊಳಿಸಲಾಗಿದೆ.
ಇರಾನ್ ಮಾಧ್ಯಮಗಳ ವರದಿಯ ಪ್ರಕಾರ, ಫೆಬ್ರವರಿ 28 ರಂದು ನಡೆದ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಖಮೇನಿ ಅವರ ಹತ್ಯೆಯಾಗಿತ್ತು. ಈ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುವಂತೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಲಕ್ಷಾಂತರ ಶೋಕತಪ್ತ ನಾಗರಿಕರು ಘೋಷಣೆಗಳನ್ನು ಕೂಗಿದರು.
ಇರಾನ್‌ನ 101 ವರ್ಷದ ಕಠಿಣ ನಿಲುವಿನ ಧರ್ಮಗುರು ಹೊಸೈನ್ ನೂರಿ ಹಮದಾನಿ ಅವರು ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಆದರೆ, ಇತ್ತೀಚಿನ ಅಮೆರಿಕ-ಇರಾನ್ ಸಂಘರ್ಷದ ಬಳಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವರದಿಗಳ ಹಿನ್ನೆಲೆಯಲ್ಲಿ, ಖಮೇನಿ ಅವರ ಪುತ್ರ ಮತ್ತು ಅವರ ಉತ್ತರಾಧಿಕಾರಿಯಾದ ಮೊಜ್ತಬಾ ಖಮೇನಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಇಡೀ ಅಂತ್ಯಕ್ರಿಯೆಯ ಕಾರ್ಯಕ್ರಮದಿಂದ ದೂರ ಉಳಿದಿರುವುದು ಜಾಗತಿಕವಾಗಿ ಗಮನ ಸೆಳೆದಿದೆ.
Iranians in Mashhad burn a giant LEGO-style Trump effigy during Khamenei's funeral processions. pic.twitter.com/IjnrII5MGs
— Open Source Intel (@Osint613) July 10, 2026
ಫೆಬ್ರವರಿ 28 ರಂದು ನಡೆದ ಭೀಕರ ದಾಳಿಯ ಮೊದಲ ದಿನವೇ ಖಮೇನಿ ಹತರಾಗಿದ್ದರು. ಈ ದಾಳಿಯಲ್ಲಿ ಖಮೇನಿ ಅವರ 14 ತಿಂಗಳ ಮೊಮ್ಮಗಳು ಸೇರಿದಂತೆ ಅವರ ಕುಟುಂಬದ ಹಲವಾರು ಸದಸ್ಯರು ಸಾವನ್ನಪ್ಪಿದ್ದರು.
ಖಮೇನಿ ಅವರ ಪಾರ್ಥಿವ ಶರೀರವನ್ನು ಮಣ್ಣು ಮಾಡುತ್ತಿದ್ದಂತೆ, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್ ಬ್ರಿಗೇಡಿಯರ್ ಜನರಲ್ ಅಹ್ಮದ್ ವಾಹಿದಿ ಶುಕ್ರವಾರ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಕಠಿಣ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಕಪಟ ಘೋಷಣೆ ಮಾಡಿದ್ದಾರೆ.