ನವದೆಹಲಿ: ‘ಮೋದಿ ಉಪನಾಮ‘ ವಿವಾದಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬ್ರಿಟನ್ ಕೋರ್ಟ್ ನಲ್ಲಿ ಮೊಕದ್ದಮೆ ಹೂಡುವುದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಎಚ್ಚರಿಕೆ ನೀಡಿದ್ದಾರೆ.
ಐಪಿಎಲ್ ನಲ್ಲಿ ಹಣಕಾಸಿನ ದುರುಪಯೋಗದ ಆರೋಪ ಕೇಳಿಬಂದ ನಂತರ 2010ರಿಂದ ಲಲಿತ್ ಮೋದಿ ಲಂಡನ್ ನಲ್ಲಿ ವಾಸಿಸುತ್ತಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
2019ರಲ್ಲಿ ನಡೆದಿದ್ದ ಚುನಾವಣಾ ರ್ಯಾಲಿಯಲ್ಲಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿ ಈಗಾಗಲೇ ರಾಹುಲ್ ಗಾಂಧಿಯವರಿಗೆ 2 ವರ್ಷ ಶಿಕ್ಷೆ ವಿಧಿಸಲಾಗಿದ್ದು, ಲೋಕಸಭಾ ಸದಸ್ಯತ್ವದಿಂದ ಅವರನ್ನು ಅನರ್ಹಗೊಳಿಸಲಾಗಿದೆ.
ತನ್ನನ್ನು ‘ನ್ಯಾಯಾಂಗ ವ್ಯವಸ್ಥೆಯಿಂದ ತಲೆಮರೆಸಿಕೊಂಡವರು‘ ಎಂದು ರಾಹುಲ್ ಹೇಳಿದ್ದಾದರೂ ಹೇಗೆ ಎಂದು ಪ್ರಶ್ನಿಸಿರುವ ಲಲಿತ್ ಮೋದಿ, ’ನಾನು ಇದುವರೆಗೆ ಯಾವುದೇ ಅಪರಾಧದಲ್ಲಿ ದೋಷಿ ಅಲ್ಲ. ನಾನು 100 ಬಿಲಿಯನ್ ಡಾಲರ್ ಹಣಕಾಸಿನ ವಹಿವಾಟಿಗೆ ಕಾರಣವಾದ ವಿಶ್ವದ ಅತಿ ದೊಡ್ಡ ಕ್ರೀಡಾ ಕಾರ್ಯಕ್ರಮ ನಡೆಸಿದ ವ್ಯಕ್ತಿ. ಭಾರತಕ್ಕೆ ಗಾಂಧಿ ಕುಟುಂಬಕ್ಕಿಂತಲೂ ಹೆಚ್ಚು ಕೊಡುಗೆಯನ್ನು ನನ್ನ ಕುಟುಂಬ ನೀಡಿದೆ. ನಿಮ್ಮ ಆರೋಪಗಳನ್ನು ಸಾಬೀತುಪಡಿಸಿ’ ಎಂದು ಸವಾಲು ಹಾಕಿದ್ದಾರೆ.