ಗಾಂಜಾ ಮಾರಾಟದ ಆರೋಪದ ಮೇಲೆ ಸೆರೆಯಾಗಿದ್ದ ಗಂಡನ ಗಾಂಜಾ ದಂಧೆಯನ್ನು ಮುಂದುವರೆಸುತ್ತಿದ್ದ ಪತ್ನಿ ಕೂಡ ಪೊಲೀಸರ ಅತಿಥಿಯಾಗಿರುವ ಘಟನೆ ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗ್ಮಾ (27) ಬಂಧಿತ ಯುವತಿ. ಈಕೆಯ ವಶದಿಂದ 13 ಲಕ್ಷ ರೂ. ಮೌಲ್ಯದ 26 ಕೆಜಿ ಗಾಂಜಾ ವಂಶಪಡಿಸಿಕೊಳ್ಳಲಾಗಿದೆ.
ನಗ್ಮಾಳ ಗಂಡ ಮುಜ್ಜು ವಿಶಾಖಪಟ್ಟಣದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ. ಇದೇ ಕೃತ್ಯದಲ್ಲಿ ತೊಡಗಿದ್ದಾಗ ಮಾಲು ಸಹಿತ ಸಿಕ್ಕ ಈತನನ್ನು ಬಂಧಿಸಿ ಜೈಲಿಗಟ್ಟಿದ್ದರು. ಗಂಡ ಜೈಲಿಗೆ ಹೋದ ಬಳಿಕ ಗಂಡನ ವೃತ್ತಿಯನ್ನೇ ಮುಂದುವರೆಸಿದ ನಗ್ಮಾ ವಿಶಾಖಪಟ್ಟಣದಿಂದ ಬಸ್ ಮೂಲಕ ಗಾಂಜಾ ಸಾಗಾಟ ಮಾಡುವ ದಂಧೆಯಲ್ಲಿ ಇಳಿದಿದ್ದಳು. ಪೊಲೀಸರಿಗೆ ಅನುಮಾನ ಬರದಿರಲಿ ಎಂದು ಜೊತೆಗೆ ತನ್ನ ತಾಯಿಯನ್ನೂ ಕರೆದೊಯ್ಯುತ್ತಿದ್ದಳು. ಕಲಾಸಿಪಾಳ್ಯದ ಬಳಿ ಒಮ್ಮೆ ಅನುಮಾನಾಸ್ಪದವಾಗಿ ನಿಂತಿದ್ದ ಈಕೆಯನ್ನು ಜಪ್ತಿಗೊಳಪಡಿಸಿದಾಗ ಗಾಂಜಾ ದಂಧೆ ಹೊರಬಿದ್ದಿದೆ.