ನವಜಾತ ಹೆಣ್ಣುಶಿಶುವನ್ನು ಕದ್ದೊಯ್ದಿದ್ದ ಮಕ್ಕಳ ಕಳ್ಳಿಯನ್ನು ಕಲಾಸಿ ಪೊಲೀಸರು ಬಂಧಿಸಿದ್ದಾರೆ. ನವಜಾತ ಶಿಶುವನ್ನು ಕದ್ದೊಯ್ದು ಅದಕ್ಕೆ ಹಾಲನ್ನೂ ಸಹ, ಕುಡಿಸದೆ ಉಪ್ಪಿಟ್ಟು ತಿನಿಸುತ್ತಿದ್ದಳೆಂದು ತಿಳಿದು ಬಂದಿದೆ. ಮಗುವಿನ ಆಕ್ರಂದನ ಕೇಳಲಾಗದೆ ಅಕ್ಕಪಕ್ಕದ ಮನೆಯವರು ವಿಚಾರಿಸಿದಾಗ ಈಕೆಯ ಹೀನ ಕೃತ್ಯ ಬಯಲಾಗಿದೆ.
ಆಯೇಷಾ ಅಲಿಯಾಸ್ ನಂದಿನಿ ಬಂಧಿತ ಆರೋಪಿ. ಸಂಸ್ಥೆಯೊಂದರ ಬ್ರೋಷರ್ ಹಿಡಿದು ದೇಣಿಗೆ ನೀಡುವಂತೆ ಮನೆಗೆ ಭೇಟಿ ನೀಡುತ್ತಿದ್ದ ಇವಳು ಹೊಂಚುಹಾಕಿ ಮಗುವನ್ನು ಕದ್ದು ಪರಾರಿಯಾಗುತ್ತಿದ್ದಳು. ಈ ಹಿಂದೆಯೂ ಈಕೆಯಿಂದ ಇಂಥಾ ಸಾಕಷ್ಟು ಕೃತ್ಯ ನಡೆದಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಆ ಬಗ್ಗೆ ತನಿಖೆ ನಡೆಸಿದ್ದಾರೆ. ಬುರ್ಖಾ ಧರಿಸಿ ಮನೆಗಳನ್ನು ಪ್ರವೇಶಿಸುತ್ತಿದ್ದ ಕಾರಣ ಸಿಸಿಟಿವಿ ಯಲ್ಲೂ ಸಹ ಈಕೆಯ ಚಹರೆ ಗೊತ್ತಾಗುತ್ತಿರಲಿಲ್ಲ.
ಇದರೊಡನೆ ದರೋಡೆಯನ್ನೂ ಸಹ ಉಪವೃತ್ತಿಯಾಗಿ ಮಾಡುತ್ತಿದ್ದ ಆಯೇಷಾ ಚಾಕು, ಚೂರಿ ಹಿಡಿದು ದಾರಿಹೋಕರನ್ನು ಬೆದರಿಸಿ ಹಣ ಕೀಳುತ್ತಿದ್ದಳೆಂಬ ಮಾಹಿತಿ ತನಿಖೆಯ ವೇಳೆ ಹೊರಬಂದಿದೆ.