ನಟ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ಬಗ್ಗೆ ಟೀಕಿಸಿರುವ ಹೆಚ್‌ಡಿಕೆ, ಬಿಜೆಪಿ ನಾಯಕರಿಗೆ ಈ ಬಾರಿ ಗೆಲುವು ಕಷ್ಟ ಅನ್ನೋದು ಗೊತ್ತಾಗಿದೆ, ಅದಕ್ಕೆ ಸಿನಿಮಾ ಸ್ಟಾರ್ಗಳನ್ನು ಕರೆಸಿ ಬಿಜೆಪಿಯವರು ಪ್ರಚಾರ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಸಿನಿಮಾ ಸ್ಟಾರ್ಗಳನ್ನು ಕರೆಸಿ ಪ್ರಚಾರ ಮಾಡ್ತಾರೆ ಅಂದ್ರೆ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲೋದು ಕಷ್ಟ ಇದೆ ಅನ್ನೋದು ಗೊತ್ತಾಗಿದೆ. ಹಾಗಾಗಿ, ನಟರ ಮುಖ ತೋರಿಸಿ ಮತ ಪಡೆಯಲು ಬಿಜೆಪಿ ಹೊರಟಿದೆ.ಆದರೆ, ನಮಗೆ ನಮ್ಮ ಕಾರ್ಯಕರ್ತರು, ನನ್ನ ಜನರೇ ಸ್ಟಾರ್ ಪ್ರಚಾರಕರು ಎಮದು ಕುಮಾರಸ್ವಾಮಿ ಹೇಳಿದ್ದಾರೆ.
ಸಿನಿಮಾ ನಟರ ಬಗ್ಗೆ ನಾನು ಲಘುವಾಗಿ ಮಾತನಾಡ್ತಿಲ್ಲ, ಆದರೆ ಅವರು ಒಂದು ಪಕ್ಷದ ಪರ ಪ್ರಚಾರ ಮಾಡಿ ಆ ಮೇಲೆ ಸುಮ್ಮನಾಗುತ್ತಾರೆ. ತಾವು ಪ್ರಚಾರ ಮಾಡಿದ ಪಕ್ಷ ಜನರಿಗೆ ಒಳ್ಳೆಯದನ್ನು ಮಾಡ್ತಿದೆಯೋ, ಇಲ್ಲವೋ ಎಂಬುದನ್ನೂ ನೋಡಲ್ಲ ಎಂದು ಹೇಳಿದ್ದಾರೆ.
ಅದೇ ವೇಳೆ, ಮಂಡ್ಯದಲ್ಲಿ ಸುಮಲತಾ ವಿರುದ್ಧ ನಿಖಿಲ್ ಸೋತಿರುವುದನ್ನು ಉಲ್ಲೇಖಿಸಿದ ಹೆಚ್‌ಡಿಕೆ, ಸಿನಿಮಾ ನಟರು ಪ್ರಚಾರ ಮಾಡಿದ ಕೆಲವು ಕಡೆ ಸೋಲು ಆಗಿದೆ. ಮಂಡ್ಯದಲ್ಲಿ ಸ್ಟಾರ್ಗಳಿಂದ ನಿಖಿಲ್ ಸೋತಿದ್ದಾರೆ ಅನ್ನೋದು ಅದು ಸುಳ್ಳು. ಬಿಜೆಪಿ, ಕಾಂಗ್ರೆಸ್, ರೈತ ಸಂಘಟನೆಗಳ ಒಳ ಒಪ್ಪಂದದಿಂದ ನಿಖಿಲ್ ಸೋತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಸುಮಲತಾ ಪರ ಚಾಲೆಂಜಿಂಗ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಬಿರುಸಿನ ಪ್ರಚಾರ ಮಾಡಿದ್ದರು. ಆ ಚುನಾವಣೆಯಲ್ಲಿ ಸುಮಲತಾ ಎದುರು ನಿಂತಿದ್ದ ನಿಖಿಲ್ ಸೋತಿದ್ದರು.