ಕೊಲ್ಕತ್ತಾ: ಸಾಮಾನ್ಯವಾಗಿ ಗಿಡಗಳಲ್ಲಿ ಕಂಡುಬರುವ ಶಿಲೀಂದ್ರ ಸೋಂಕು ಕೊಲ್ಕತ್ತಾದ ವ್ಯಕ್ತಿಯೊಬ್ಬರಲ್ಲಿ ಕಂಡುಬಂದಿದ್ದು, ವೈದ್ಯಲೋಕದಲ್ಲಿ ಅಚ್ಚರಿ ಹುಟ್ಟಿಸಿದೆ.
ಶಿಲೀಂಧ್ರ ಗಿಡಗಳ ಸಂಪರ್ಕದಿಂದಾಗಿ ಗಿಡಗಳ ಸೋಂಕು ಮನುಷ್ಯರಿಗೂ ತಗಲಬಹುದು ಎನ್ನುವುದನ್ನು ಈ ವಿದ್ಯಮಾನ ಹೇಳಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
61 ವರ್ಷದ ವ್ಯಕ್ತಿಯೊಬ್ಬರು 3 ತಿಂಗಳಿನಿಂದ ವಿಚಿತ್ರ ಧ್ವನಿ, ಕೆಮ್ಮು, ಸುಸ್ತು, ಆಹಾರ ನುಂಗಲು ಕಷ್ಟವಾಗುವುದು ಮೊದಲಾದ ಸಮಸ್ಯೆಗಳಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು.
“ಅವರಿಗೆ ಡಯಾಬಿಟಿಸ್ ಇರಲಿಲ್ಲ. ಎಚ್ ಐವಿ, ಸೋಂಕುಗಳು, ಮೂತ್ರಪಿಂಡ ಸಮಸ್ಯೆಗಳು, ಇತರ ಆರೋಗ್ಯ ಸಮಸ್ಯೆಗಳು ಇರಲಿಲ್ಲ. ಪ್ಲಾಂಟ್ ಮೈಕಾಲಾಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಅವರು ತಮ್ಮ ಸಂಶೋಧನೆಯ ಭಾಗವಾಗಿ ಅಣಬೆ, ಕೊಳೆಯುವ ವಸ್ತುಗಳು, ಶಿಲೀಂಧ್ರಗಳ ಮೇಲೆ ಕೆಲಸ ಮಾಡುತ್ತಿದ್ದರು” ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಗಿಡಗಳಲ್ಲಿ ಬೆಳ್ಳಿ ಬಣ್ಣದ ಎಲೆಗಳನ್ನು ಉಂಟುಮಾಡುವ ಶಿಲೀಂಧ್ರವೊಂದಿದೆ. ಇದು ಗಿಡದ ಶಿಲೀಂಧ್ರ ಮನುಷ್ಯನೊಬ್ಬನಿಗೆ ಸೋಂಕುಂಟು ಮಾಡಿರುವ ಮೊದಲ ಪ್ರಕರಣವಾಗಿದೆ ಎಂದಿದ್ದಾರೆ.