ಕೋಲಾರ: ಕೇರಳದ (Kerala) ಶಬರಿಮಲೆ (Sabarimala) ಯಾತ್ರೆಗೆ ತೆರಳಿದ್ದ ಕೋಲಾರ (Kolar) ಮೂಲದ ವ್ಯಕ್ತಿಯೊಬ್ಬರು ತಮಿಳುನಾಡಿನಲ್ಲಿ (Tamilnadu) ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ನಾಪತ್ತೆಯಾಗಿರುವ ವ್ಯಕ್ತಿಯನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ದೇವಗಾನಹಳ್ಳಿ ಗ್ರಾಮದ ರವಿ (40) ಎಂದು ಗುರುತಿಸಲಾಗಿದೆ. ಅವರು ಮಂಗಳವಾರ ಶಬರಿಮಲೆ ಯಾತ್ರೆಯ ಸಂದರ್ಭದಲ್ಲಿ ತಮಿಳುನಾಡಿನ ತಿರುಚಂದೂರ್‌ಗೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ನಾಪತ್ತೆಯಾಗಿ ನಾಲ್ಕು ದಿನಗಳಾದರೂ ಇನ್ನೂ ಯಾವುದೇ ಸುಳಿವು ದೊರಕಿಲ್ಲ.
ಈ ಸಂಬಂಧ ತಿರುಚಂದೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಹಾಗೂ ಕುಟುಂಬಸ್ಥರು ಸಂಯುಕ್ತವಾಗಿ ರವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬಸ್, ಕ್ರೂಸರ್ ನಡುವೆ ಅಪಘಾತ; ಮೂವರು ಸ್ಥಳದಲ್ಲೇ ಸಾ*ವು!
ನವವಿವಾಹಿತೆ ನೇಣಿಗೆ ಶರಣು
ಸಿಟಿ ವ್ಯಾಮೋಹದಿಂದಾಗಿ ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ (Marriage) ನವ ವಿವಾಹಿತೆಯೊಬ್ಬಳು (Newly Married Woman) ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಕಲಬುರಗಿ (Kalaburagi) ನಗರದ ಆಜಾದಪುರ್ ಬಡಾವಣೆಯಲ್ಲಿ ನಡೆದಿದೆ.
ಮೃತಳನ್ನು ಅನಸೂಯಾ ಎಂದು ಗುರುತಿಸಲಾಗಿದೆ. ಈಕೆ ಪತಿ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ. ಮನೆ ಮಗಳ ಹುಚ್ಚು ನಿರ್ಧಾರಕ್ಕೆ ಕುಟುಂಬಸ್ಥರು ದಿಗ್ಭ್ರಾಂತರಾಗಿದ್ದಾರೆ.
ಅತ್ತೆ ಮಗ ಅವಿನಾಶ್ ಜೊತೆ ಸಪ್ತಪದಿ ತುಳಿದಿದ್ದ ಅನಸೂಯಾ, ಆರಂಭದಲ್ಲಿ ಚೆನ್ನಾಗಿಯೇ ಇದ್ದಳು. ಈಕೆಗೆ ಮೂವರು ಸಹೋದರಿಯರಿದ್ದು, ಅವರಿಗೂ ವಿವಾಹವಾಗಿತ್ತು. ಮದುವೆ ಬಳಿಕ ಅವರೆಲ್ಲರೂ ಸಿಟಿಯಲ್ಲಿ ನೆಲೆಸಿದ್ದರು. ಇದೇ ವಿಚಾರಕ್ಕೆ ದಿನ ಕಳೆದಂತೆ ಅನಸೂಯಾಗೆ ಬೇಸರ ಮೂಡಿದೆ.
ತಾನು ಮಾತ್ರ ಮದುವೆಯಾಗಿ ಹಳ್ಳಿಯಲ್ಲಿ ಇದ್ದೇನೆ ಎಂಬ ಗಿಲ್ಟಿ ಫೀಲ್ ಬಂದಿದೆ. ಹೀಗಾಗಿ ಮಾನಸಿಕವಾಗಿ ನೊಂದಿದ್ದ ಅನುಸೂಯ, ತವರಿಗೆ ಹೋದಾಗಲೂ ವಿಚಾರವನ್ನು ಒಂದೆರಡು ಬಾರಿ ಕುಟುಂಬಸ್ಥರಿಗೆ ಹೇಳಿದ್ದಳು. ತಾನು ಉತ್ತಮ ವಿದ್ಯಾಭ್ಯಾಸ ಪಡೆದರೂ ಹಳ್ಳಿಯಲ್ಲಿ ಜೀವನ ನಡೆಸುತ್ತಿರುವ ಕೊರಗಿನ ಬಗ್ಗೆ ಅಲವತ್ತುಕೊಂಡಿದ್ದಳು. ಈ ವೇಳೆ ಆಕೆಗೆ ಪೋಷಕರು ಬುದ್ಧಿಮಾತು ಕೂಡ ಹೇಳಿದ್ದರು. ಆದರೂ ಇದೇ ವಿಚಾರವಾಗಿ ಕೊರಗುತ್ತಿದ್ದ ಆಕೆ ಕೊನೆಗೂ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಇನ್ನು ಮದುವೆಗೂ ಮುನ್ನ ಅನಸೂಯಾ ಕೂಡ ಬೆಂಗಳೂರಿನಲ್ಲಿ ಒಂದು ವರ್ಷ ಕೆಲಸ ಮಾಡಿದ್ದಳು. ಹೀಗಾಗಿ ಆಕೆಗೆ ಹಳ್ಳಿ ಜೀವನ ಅಂದ್ರೆ ಅಷ್ಟಾಗಿ ಆಗಿ ಬರುತ್ತಿರಲಿಲ್ಲ. ಇತ್ತ ಪ್ರೀತಿಸಿದ ಹುಡುಗ ಬಿಡೋಕು ಆಗ್ತಿರಲಿಲ್ಲ. ಮದುವೆ ಬಳಿಕ ಸಿಟಿ ವ್ಯಾಮೋಹ ಈಕೆಯನ್ನು ವಿಪರೀತ ಕಾಡತೊಡಗಿದೆ.
ಇದೇ ಬೇಸರದಿಂದ ಕಲಬುರಗಿಯ ಆಜಾದಪುರದಲ್ಲಿರುವ ಗಂಡನ ಮನೆಯಲ್ಲಿ ನಿನ್ನೆ ಮಧ್ಯಾಹ್ನ ಯಾರೂ ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.