ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವುದಿಲ್ಲ ಎಂದು ವರದಿಯಾದ ಬೆನ್ನಲ್ಲೇ ಕೋಲಾರದ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಿರುವ ಸಿದ್ದರಾಮಯ್ಯ ಸ್ಪರ್ಧೆಯ ಬಗ್ಗೆ ಚರ್ಚಿಸಿದ್ದಾರೆ. ಎಂಬಿ ಪಾಟೀಲ್ ಸೇರಿದಂತೆ ಹಲವು ಸಿದ್ದರಾಮಯ್ಯ ಆಪ್ತರು ಸಿದ್ದು ನಿವಾಸಕ್ಕೆ ಧಾವಿಸಿದ್ದಾರೆ.
ಆದರೆ, ಸಿದ್ದರಾಮಯ್ಯ ಕರೆದ ಸಭೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಬಣದ ಮುಖಂಡರು ಹಾಜರಾಗದೆ ತಪ್ಪಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ನಿಲುವಿನಿಂದ ಬೇಸರಗೊಂಡು ಸಭೆಗೆ ಗೈರು ಹಾಜರಾಗಿದ್ದಾರೆಂದು ಪಕ್ಷದ ಮೂಲಗಳು ಹೇಳಿವೆ.
ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರನ್ನು ಕೋಲಾರದಿಂದ ಸ್ಪರ್ಧಿಸುವಂತೆ ರಮೇಶ್ ಕುಮಾರ್ ಬಣವೇ ಪ್ರಯತ್ನಿಸಿದ್ದು, ಏಕಾಏಕಿ ಸ್ಪರ್ಧೆಯಿಂದ ಹಿಂದೆ ಸರಿಯುವುದರ ಬಗ್ಗೆ ಅಸಮಾಧಾನ ಎದ್ದಿದೆ. ಮುನಿಯಪ್ಪ ಸೇರಿದಂತೆ ಕೆಲವು ಸ್ಥಳೀಯ ಮುಖಂಡರ ವಿರೋಧದ ನಡುವೆಯೂ ರಮೇಶ್ ಬಹಳ ಪ್ರಯತ್ನ ಪಟ್ಟು ಕೋಲಾರದಿಂದ ಸ್ಪರ್ಧಿಸಲು ಅಖಾಡ ತಯಾರಿಸಿದ್ದರು.
ಸಿದ್ದರಾಮಯ್ಯ ಸ್ಪರ್ಧೆಯಿಂದ ಕೋಲಾರ ಸೇರಿದಂತೆ, ಚಿಕ್ಕಬಳ್ಳಾಪುರದ ಕ್ಷೇತ್ರದಲ್ಲೂ ಪರಿಣಾಮ ಬೀರುವ ಸಾಧ್ಯತೆ ಇದ್ದು, ಸಿದ್ದರಾಮಯ್ಯ ವರ್ಚಸ್ಸು ಆ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಕರಾತ್ಮಕವಾಗಿ ಬೀರುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಸಿದ್ದು ಸ್ಪರ್ಧೆಯಿಂದ ಹಿಂಜರಿದಿದ್ದು, ಸ್ಥಳೀಯ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಅಸಮಾಧಾನವನ್ನು ಪಕ್ಷ ಹೇಗೆ ನಿಭಾಯಿಸಲಿದೆ ಅನ್ನುವುದು ಸದ್ಯಕ್ಕೆ ಅಸ್ಪಷ್ಟವಾಗಿದೆ.
ಅದಾಗ್ಯೂ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದೇ ಇಲ್ಲ ಅನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಒಂದು ವೇಳೆ ಕೋಲಾರ ಬಿಟ್ಟು ವರುಣಾದಿಂದ ಸ್ಪರ್ಧೆಗೆ ನಿಂತರೆ ಪುತ್ರ ಯತೀಂದ್ರ ಅವರ ರಾಜಕೀಯ ಭವಿಷ್ಯ ಅತಂತ್ರ ಸ್ಥಿತಿಗೆ ತಲುಪುವ ಆತಂಕವೂ ಸಿದ್ದರಾಮಯ್ಯ ಅವರನ್ನು ಕಾಡುತ್ತಿರುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಗಂಭೀರ ನಿರ್ಧಾರವನ್ನು ಸಿದ್ದರಾಮಯ್ಯ ತಳೆಯಲಿದ್ದಾರೆ ಎನ್ನಲಾಗಿದೆ.