Monday, June 15, 2026
Homeಟಾಪ್ ನ್ಯೂಸ್FIRE MISHAP: ಶಾರ್ಟ್ ಸರ್ಕ್ಯೂಟ್‌ನಿಂದ ಗ್ಯಾರೇಜ್ ಭಸ್ಮ, 5 ಕಾರುಗಳು ಬೆಂಕಿಗೆ ಆಹುತಿ!

FIRE MISHAP: ಶಾರ್ಟ್ ಸರ್ಕ್ಯೂಟ್‌ನಿಂದ ಗ್ಯಾರೇಜ್ ಭಸ್ಮ, 5 ಕಾರುಗಳು ಬೆಂಕಿಗೆ ಆಹುತಿ!

ಕೋಲಾರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ (Short circuit) ಕಾರ್ ಸರ್ವಿಸ್ ಸೆಂಟರ್‌ಗೆ (Car service) ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಗ್ಯಾರೇಜ್‌ನಲ್ಲಿದ್ದ ಬರೋಬ್ಬರಿ 5 ಕಾರುಗಳು ಬೆಂಕಿಯ ಜ್ವಾಲೆಗೆ ಸಿಲುಕಿ ಸುಟ್ಟು ಹೋಗಿರುವ ಘಟನೆ ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಎಸ್.ಜಿ. ಕೋಟೆ ಸಮೀಪ ನಡೆದಿದೆ.

ಸ್ಥಳೀಯ ನಿವಾಸಿ ಈರಣ್ಣ ಎಂಬುವರಿಗೆ ಸೇರಿದ ‘ಚೌಡೇಶ್ವರಿ ಕಾರ್ ಸರ್ವಿಸ್ ಸೆಂಟರ್’ನಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಗ್ಯಾರೇಜ್‌ನ ಒಳಗಡೆ ನಿಲ್ಲಿಸಲಾಗಿದ್ದ ಮೂರು ಕಾರುಗಳು ಸಂಪೂರ್ಣವಾಗಿ ಸುಟ್ಟು ಬೂದಿಯಾಗಿದ್ದರೆ, ಶೆಡ್‌ನ ಹೊರಭಾಗದಲ್ಲಿ ನಿಲ್ಲಿಸಲಾಗಿದ್ದ ಮತ್ತೊಂದು ಎರಡು ಕಾರುಗಳಿಗೆ ಭಾಗಶಃ ಹಾನಿಯಾಗಿದ್ದು, ಒಳಗಿದ್ದ ಉಪಕರಣಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳು ನಾಶವಾಗಿವೆ.

ಗ್ಯಾರೇಜ್‌ನಿಂದ ದಟ್ಟವಾದ ಹೊಗೆ ಹಾಗೂ ಬೆಂಕಿಯ ಜ್ವಾಲೆಗಳು ಏಳುತ್ತಿರುವುದನ್ನು ಕಂಡು ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಬಂಗಾರಪೇಟೆ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ, ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಾರ್ಟ್ ಸರ್ಕ್ಯೂಟ್‌ನಿಂದ ಶಿಕ್ಷಕನ ಮನೆ ಭಸ್ಮ; ಅರ್ಧ ಕೆಜಿ ಚಿನ್ನ, ನಗದು ಅಗ್ನಿಗೆ ಆಹುತಿ

ಚಿಕ್ಕಬಳ್ಳಾಪುರ: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಶಿಕ್ಷಕರೊಬ್ಬರ ಮನೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ನಡೆದಿದೆ. ಈ ಅಗ್ನಿ ಅವಘಡದಲ್ಲಿ ಮನೆಯಲ್ಲಿದ್ದ ಬೆಲೆಬಾಳುವ ಚಿನ್ನಾಭರಣ ಹಾಗೂ ನಗದು ಸುಟ್ಟು ಕರಕಲಾಗಿದೆ.

ಗ್ರಾಮದ ಶಿಕ್ಷಕ ಮಧುಸೂದನ್ ರೆಡ್ಡಿ ಎಂಬುವವರಿಗೆ ಸೇರಿದ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಅಪಘಾತದ ಸಮಯದಲ್ಲಿ ಮಧುಸೂದನ್ ಅವರು ಶಾಲೆಗೆ ತೆರಳಿದ್ದರು ಹಾಗೂ ಅವರ ಪತ್ನಿ ಹಾಲಿನ ಕೇಂದ್ರಕ್ಕೆ ಹೋಗಿದ್ದರು. ಶಾಲೆಗೆ ರಜೆ ಇದ್ದ ಕಾರಣ ಮಕ್ಕಳಿಬ್ಬರು ಮಾತ್ರ ಮನೆಯಲ್ಲಿದ್ದರು. ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಾಗ ಮಕ್ಕಳಿಬ್ಬರು ತಕ್ಷಣ ಮನೆಯಿಂದ ಹೊರಬಂದಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದಂತಾಗಿದೆ.

ಈ ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ಸುಮಾರು ಅರ್ಧ ಕೆಜಿ ಚಿನ್ನಾಭರಣಗಳು ಹಾಗೂ 1 ಲಕ್ಷ ರೂಪಾಯಿ ನಗದು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟು ಭಸ್ಮವಾಗಿವೆ.

ಹೆಚ್ಚಿನ ಸುದ್ದಿ

Change Language »
error: Content is protected !!