Saturday, May 16, 2026
Homeಟಾಪ್ ನ್ಯೂಸ್KODAGU: ಕೊಡಗಿನಲ್ಲಿ ‘ಕೈ’-ಕಮಲ ಕದನ! ದುಬಾರೆ ತೂಗುಸೇತುವೆ ಶಂಕುಸ್ಥಾಪನೆ ವೇಳೆ ಸಚಿವರಿಗೆ ಘೇರಾವ್

KODAGU: ಕೊಡಗಿನಲ್ಲಿ ‘ಕೈ’-ಕಮಲ ಕದನ! ದುಬಾರೆ ತೂಗುಸೇತುವೆ ಶಂಕುಸ್ಥಾಪನೆ ವೇಳೆ ಸಚಿವರಿಗೆ ಘೇರಾವ್

ಕುಶಾಲನಗರ: ಕೊಡಗು (Kodagu) ಜಿಲ್ಲೆಯ ಪ್ರಖ್ಯಾತ ಪ್ರವಾಸಿ ತಾಣ ದುಬಾರೆಯಲ್ಲಿ ಬಹುದಿನಗಳ ಬೇಡಿಕೆಯಾಗಿದ್ದ ತೂಗುಸೇತುವೆ ನಿರ್ಮಾಣದ ವಿಚಾರ ಈಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಬುಧವಾರ ಜಿಲ್ಲೆಗೆ ಭೇಟಿ ನೀಡಿದ್ದ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೆ ಬಿಜೆಪಿ ಕಾರ್ಯಕರ್ತರು ಘೇರಾವ್ ಹಾಕಲು ಯತ್ನಿಸಿದ ಘಟನೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

₹7.50 ಕೋಟಿ ವೆಚ್ಚದ ತೂಗುಸೇತುವೆ
ದುಬಾರೆ ಆನೆ ಶಿಬಿರಕ್ಕೆ ಸಂಪರ್ಕ ಕಲ್ಪಿಸುವ 7.50 ಕೋಟಿ ರೂಪಾಯಿ ವೆಚ್ಚದ ತೂಗುಸೇತುವೆ ನಿರ್ಮಾಣದ ಶಂಕುಸ್ಥಾಪನೆಗಾಗಿ ಸಚಿವರು ಆಗಮಿಸಿದ್ದರು. ಈ ವೇಳೆ ಕುಶಾಲನಗರ ಸಮೀಪದ ಗುಡ್ಡೆಹೊಸೂರಿನಲ್ಲಿ ಜಮಾಯಿಸಿದ ಸೋಮವಾರಪೇಟೆ ಮಂಡಲ ಬಿಜೆಪಿ ಕಾರ್ಯಕರ್ತರು, ಜಿಲ್ಲೆಯಲ್ಲಿ ದಶಕಗಳಿಂದ ಕಾಡುತ್ತಿರುವ ಆನೆ-ಮಾನವ ಸಂಘರ್ಷ ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಮತ್ತು ಸಿ ಅಂಡ್ ಡಿ ಭೂಮಿ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಆರೋಪಿಸಿ ಸಚಿವರ ವಾಹನ ತಡೆದು ಪ್ರತಿಭಟನೆ ನಡೆಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ಬಿಜೆಪಿಯ ಈ ನಡೆಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ, ಶಾಸಕ ಡಾ. ಮಂಥರ್ ಗೌಡ ಅವರ ವಿಶೇಷ ಆಸಕ್ತಿಯಿಂದ ಈ ಸೇತುವೆ ನಿರ್ಮಾಣವಾಗುತ್ತಿದೆ. ಇದು ಸುಮಾರು 120 ಆದಿವಾಸಿ ಕುಟುಂಬಗಳಿಗೆ ನೆರವಾಗಲಿದೆ. ಕಳೆದ 25 ವರ್ಷಗಳಲ್ಲಿ ಬಿಜೆಪಿ ಶಾಸಕರಿಗೆ ಮಾಡಲಾಗದ ಅಭಿವೃದ್ಧಿ ಕೆಲಸಗಳನ್ನು ಈಗಿನ ಸರ್ಕಾರ ಮಾಡುತ್ತಿರುವುದನ್ನು ಸಹಿಸದೆ ಬಿಜೆಪಿ ಈ ರೀತಿ ಹತಾಶ ಪ್ರದರ್ಶನ ಮಾಡುತ್ತಿದೆ ಎಂದು ಕಿಡಿಹಾಕಿದ್ದಾರೆ.

ಜಿಲ್ಲೆಯ ಶಾಸಕರಾದ ಎ.ಎಸ್. ಪೊನ್ನಣ್ಣ ಮತ್ತು ಡಾ. ಮಂಥರ್ ಗೌಡ ಅವರು ಕೊಡಗಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುತ್ತಿರುವುದನ್ನು ಕಂಡು ತಮ್ಮ ರಾಜಕೀಯ ಭವಿಷ್ಯ ಮಂಕಾಗಬಹುದು ಎಂಬ ಭಯದಿಂದ ಮಾಜಿ ಶಾಸಕರು ತಮ್ಮ ಬೆಂಬಲಿಗರ ಮೂಲಕ ಇಂತಹ ಅಡ್ಡಿಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮೈನಾ ಆರೋಪಿಸಿದ್ದಾರೆ. ಆನೆ ಸಂಘರ್ಷ ತಡೆಗೆ ಸರ್ಕಾರ ವೈಜ್ಞಾನಿಕ ಕ್ರಮ ಕೈಗೊಳ್ಳುತ್ತಿರುವಾಗ ಸಹಕಾರ ನೀಡುವ ಬದಲು ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸುವುದು ಜನತೆ ತಲೆತಗ್ಗಿಸುವಂತಿದೆ ಎಂದು ಅವರು ಹೇಳಿದ್ದಾರೆ. ಸದ್ಯ ಕೊಡಗಿನ ಅಭಿವೃದ್ಧಿ ವಿಚಾರವು ಇಬ್ಬರು ನಾಯಕರ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಆನೆಗಳಿಗೂ ಬರಲಿದೆ ‘ಆಧಾರ್’ ಕಾರ್ಡ್! ಕರ್ನಾಟಕದ ಕುಮ್ಕಿ ಆನೆಗಳ ಡಿಎನ್‌ಎ ಪ್ರೊಫೈಲಿಂಗ್ ಆರಂಭಿಸಿದ ಅರಣ್ಯ ಇಲಾಖೆ

ಹೆಚ್ಚಿನ ಸುದ್ದಿ

Change Language »
error: Content is protected !!