Saturday, May 16, 2026
Homeಟಾಪ್ ನ್ಯೂಸ್BENGALURU: ಟಿಕೆಟ್‌ ಇದ್ದರೂ ವಿಮಾನ ಹತ್ತಲು ನಿರಾಕರಣೆ, ಏರ್‌ಲೈನ್ಸ್‌ ಸಿಇಒ ವಿರುದ್ಧ FIR ದಾಖಲಿಸಲು ಕೋರ್ಟ್...

BENGALURU: ಟಿಕೆಟ್‌ ಇದ್ದರೂ ವಿಮಾನ ಹತ್ತಲು ನಿರಾಕರಣೆ, ಏರ್‌ಲೈನ್ಸ್‌ ಸಿಇಒ ವಿರುದ್ಧ FIR ದಾಖಲಿಸಲು ಕೋರ್ಟ್ ಆದೇಶ!

ಬೆಂಗಳೂರು: ಕುಟುಂಬದೊಂದಿಗೆ ಸುಂದರ ಪ್ರವಾಸಕ್ಕೆಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರಿಗೆ ಕೆಎಲ್‌ಎಂ (KLM) ರಾಯಲ್ ಡಚ್ ಏರ್‌ಲೈನ್ಸ್ ಅಕ್ಷರಶಃ ಶಾಕ್ ನೀಡಿದೆ. ವೀಸಾ ನಿಯಮಗಳ ತಪ್ಪು ವ್ಯಾಖ್ಯಾನದಿಂದ ಎಂಟು ಮಂದಿ ಸದಸ್ಯರಿದ್ದ ಕುಟುಂಬಕ್ಕೆ ವಿಮಾನ ಏರಲು ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗ ಏರ್‌ಲೈನ್ಸ್‌ನ ಸಿಇಒ ಮತ್ತು ಸಿಒಒ ಸೇರಿದಂತೆ ಉನ್ನತ ಅಧಿಕಾರಿಗಳ ವಿರುದ್ಧ ಎಫ್‌ಐಆರ್ (FIR) ದಾಖಲಿಸುವಂತೆ ಕರ್ನಾಟಕದ ನ್ಯಾಯಾಲಯ ಆದೇಶಿಸಿದೆ.

ತಮಿಳುನಾಡಿನ ಸೇಲಂ ಮೂಲದ ವೈದ್ಯಕೀಯ ಸಂಸ್ಥೆಯೊಂದರ ಅಧ್ಯಕ್ಷ ಜೆ.ಎಸ್. ಸತೀಶ್‌ಕುಮಾರ್ ಅವರು ಜೂನ್ 19, 2024 ರಂದು ತಮ್ಮ ಕುಟುಂಬದ ಎಂಟು ಸದಸ್ಯರೊಂದಿಗೆ ಪೆರು ದೇಶಕ್ಕೆ ಪ್ರವಾಸ ಯೋಜಿಸಿದ್ದರು. ಇದಕ್ಕಾಗಿ ಅವರು ಕೆಎಲ್‌ಎಂ ಏರ್‌ಲೈನ್ಸ್‌ನಲ್ಲಿ ಸುಮಾರು 49 ಲಕ್ಷ ರೂಪಾಯಿ ವೆಚ್ಚದ ಎಂಟು ಬಿಸಿನೆಸ್ ಕ್ಲಾಸ್ ಟಿಕೆಟ್‌ಗಳನ್ನು ಬುಕ್ ಮಾಡಿದ್ದರು.

ಪ್ರಯಾಣ ತಡೆಗೆ ಕಾರಣ?

ಆದರೆ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಪ್ರಕ್ರಿಯೆಯ ವೇಳೆ ಏರ್‌ಲೈನ್ಸ್ ಸಿಬ್ಬಂದಿ ವೀಸಾ ಇಲ್ಲ ಎಂಬ ಕಾರಣ ನೀಡಿ ಪ್ರಯಾಣಕ್ಕೆ ತಡೆ ಒಡ್ಡಿದ್ದಾರೆ. ಸತೀಶ್‌ಕುಮಾರ್ ಅವರ ಪ್ರಕಾರ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಅಮೆರಿಕ, ಬ್ರಿಟನ್ ಅಥವಾ ಆಸ್ಟ್ರೇಲಿಯಾದಂತಹ ದೇಶಗಳ ಮಾನ್ಯತೆ ಇರುವ ವೀಸಾ ಹೊಂದಿದ್ದರೆ ಪೆರು ಪ್ರವೇಶಿಸಲು ಪ್ರತ್ಯೇಕ ವೀಸಾ ಅಗತ್ಯವಿಲ್ಲ. ಆದರೆ ವಿಮಾನ ನಿಲ್ದಾಣದ ಸಿಬ್ಬಂದಿ ಈ ನಿಯಮವನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗಿ, ಕೊನೆ ಕ್ಷಣದಲ್ಲಿ ಬೋರ್ಡಿಂಗ್ ನಿರಾಕರಿಸಿದ್ದಾರೆ.

ವಿಮಾನ ಸಂಸ್ಥೆಯ ಈ ನಿರ್ಧಾರವನ್ನು ಪ್ರಶ್ನಿಸಿ ಕಾನೂನು ಹೋರಾಟದ ಎಚ್ಚರಿಕೆ ನೀಡಿದಾಗ, ಏರ್‌ಲೈನ್ಸ್ ತಮ್ಮ ಕುಟುಂಬವನ್ನು ‘ರಡ್-ಫ್ಲಾಗ್ ಮಾಡಿದೆ ಎಂದು ಸತೀಶ್‌ಕುಮಾರ್ ಆರೋಪಿಸಿದ್ದಾರೆ. ಇದರಿಂದಾಗಿ ಮುಂದೆ ಅವರು ಸಿಂಗಾಪುರ ಮತ್ತು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುವಾಗಲೂ ಭದ್ರತಾ ಅಧಿಕಾರಿಗಳಿಂದ ಅನಗತ್ಯ ತಪಾಸಣೆ ಮತ್ತು ಪ್ರಶ್ನೆಗಳನ್ನು ಎದುರಿಸುವಂತಾಯಿತು. ಪೆರು ದೇಶಕ್ಕೆ ಹೋಗದಿದ್ದರೂ, ಅಲ್ಲಿಂದ ಡಿಪೋರ್ಟ್ ಆಗಿದ್ದೀರಿ ಎಂಬ ಸುಳ್ಳು ಮಾಹಿತಿಯನ್ನು ಏರ್‌ಲೈನ್ಸ್ ಹಂಚಿಕೊಂಡಿದೆ ಎಂದು ಅವರು ದೂರಿದ್ದಾರೆ.

ಈ ಬಗ್ಗೆ ದೇವನಹಳ್ಳಿಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ದೂರು ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು, ಏರ್‌ಲೈನ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (COO) ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದೆ. ಇದು ಕೇವಲ ಹಣದ ವಿಷಯವಲ್ಲ, ಹೊಣೆಗಾರಿಕೆಯ ಪ್ರಶ್ನೆ. ಇಂತಹ ಘಟನೆ ಮತ್ತೆ ಯಾರಿಗೂ ಆಗಬಾರದು, ಎಂದು ಸತೀಶ್‌ಕುಮಾರ್ ಹೇಳಿದ್ದಾರೆ. ಈ ಪ್ರಕರಣವು ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ದಾಖಲೆಗಳನ್ನು ತಪಾಸಣೆ ಮಾಡುವಲ್ಲಿ ತೋರುವ ಬೇಜವಾಬ್ದಾರಿತನ ಮತ್ತು ಅದರ ಪರಿಣಾಮಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!