ಧಾರವಾಡ: ಧಾರವಾಡದ (Dharwad) ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯಲ್ಲಿ (KIADB) ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ನಡೆದ ಪ್ರಕರಣದಲ್ಲಿ ನಕಲಿ ದಾಖಲೆ (Fake Documents) ಸೃಷ್ಟಿ ಮಾಡಿದ್ದ ಆರೋಪಿ ರವಿ ಕುರುಬೆಟ್‌ನನ್ನು (Ravi) ಇದೀಗ ಬಂಧಿಸಲಾಗಿದೆ.
ಎರಡೆರೆಡು ಬಾರಿ ಪರಿಹಾರ
ಧಾರವಾಡ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 2010-12ರ ಅವಧಿಯಲ್ಲಿ ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿಗೆ 2012ರಲ್ಲೇ ಒಂದು ಬಾರಿ ಪರಿಹಾರ ನೀಡಲಾಗಿತ್ತು. ಆದರೆ ಮತ್ತೆ 2021-22ರಲ್ಲಿ ಅನೇಕ ಜಮೀನುಗಳಿಗೆ ಸುಮಾರು 19.99 ಕೋಟಿ ಪರಿಹಾರ ನೀಡಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಇದರ ತನಿಖೆಯನ್ನ ಇಡಿಗೆ ವಹಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಇಡಿ ಇದೀಗ ನಕಲಿ ದಾಖಲೆ ಸೃಷ್ಟಿ ಮಾಡಿದ್ದ ಆರೋಪಿಯನ್ನ ವಶಕ್ಕೆ ಪಡೆದಿದೆ.
72 ಕೋಟಿ ರೂ ಅಕ್ರಮ ಬಯಲಿಗೆ
ಈ ಪ್ರಕರಣದ ಬಗ್ಗೆ ತನಿಖೆ ಮಾಡಲು ಆರಂಭಿಸಿದ ಇಡಿಗೆ ಅನೇಕ ಅಕ್ರಮಗಳು ನಡೆದಿರುವ ಬಗ್ಗೆ ತಿಳಿದುಬಂದಿದೆ. ಅದರಲ್ಲೂ ಈ ಪರಿಹಾರ ಕೊಡುವ ನೆಪದಲ್ಲಿ ಸುಮಾರು 72 ಕೋಟಿ ರೂಪಾಯಿಗಳಷ್ಟು ಅಕ್ರಮ ನಡೆದಿರುವುದು ಪತ್ತೆಯಾಗಿತ್ತು. ಇನ್ನು ಈ ಪ್ರಕರಣದಲ್ಲಿ ಹಿಂದೆ ಕೆಐಎಡಿಬಿ ನಿವೃತ್ತ ಅಧಿಕಾರಿ ವಸಂತಕುಮಾರ್ ಸಜ್ಜನ್ ಅವರನ್ನ ಸಹ ಬಂಧಿಸಲಾಗಿತ್ತು. ನಂತರ ಈ ಪ್ರಕರಣದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಅಲ್ಲಾಬಕ್ಷ ದುಂಡಸಿರನ್ನು ಸಹ ಇಡಿ ಬಂಧಿಸಿದ್ದು, ಇನ್ನೂ ಯಾರೆಲ್ಲಾ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನ ತನಿಖೆ ಮಾಡಲಾಗುತ್ತಿದೆ.